ಎಸಿ, ತಹಸೀಲ್ದಾರ್ ವಿರುದ್ಧ ಕ್ರಿಮಿನಲ್ ಕೇಸ್

forest land
Published on

ಬೆಂಗಳೂರು: ರಕ್ಷಿತ ಅರಣ್ಯ ಭೂಮಿಯನ್ನು ನಿಯಮಬಾಹಿರವಾಗಿ ಕಂದಾಯ ಜಮೀನಾಗಿ ಬದಲಿಸಿ ಕರ್ತವ್ಯಲೋಪಕ್ಕೆ ಒಳಗಾಗಿರುವ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಡಾ. ಎಂ.ಜಿ.ಶಿವಣ್ಣ ಹಾಗೂ ತಹಸೀಲ್ದಾರ್ ಅಜಿತ್‌ಕುಮಾರ್ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಗರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿದೆ.

ನಗರದ ಕೃಷ್ಣರಾಜಪುರ ಹೋಬಳಿಯ ಕೊತ್ತನೂರು ಗ್ರಾಮದಲ್ಲಿರುವ 17 ಎಕರೆ 34 ಗುಂಟೆ ವಿಸ್ತೀರ್ಣದ ರಕ್ಷಿತ ಅರಣ್ಯ ಭೂಮಿ ಇದೆ. ಇದನ್ನು 1983ರಲ್ಲೇ ಅಂದಿನ ಜಿಲ್ಲಾಧಿಕಾರಿಯವರು ಅಧಿಕೃತ ಆದೇಶ ಹೊರಡಿಸಿ ಅರಣ್ಯ ಭೂಮಿಯನ್ನು ದೃಢಪಡಿಸಿದ್ದರು. ಈ ಭೂಮಿಯನ್ನು ಅರಣ್ಯ ಇಲಾಖೆ 1999-2000ರಲ್ಲಿ ತನ್ನ ಸುಪರ್ದಿಗೆ ಪಡೆದಿತ್ತು. ಆದರೆ, ನಗರದ ಹೊರವಲಯದ ಪ್ರಮುಖ ಜಾಗದಲ್ಲಿರುವ ಈ ಜಮೀನನ್ನು ಅನ್ಯ ವ್ಯಕ್ತಿಗಳ ಮೂಲಕ ಪರಭಾರೆ ಮಾಡುವ ಕೃತ್ಯದಲ್ಲಿ ಈ ಇಬ್ಬರೂ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದಾಗಿ ಆರೋಪ ಕೇಳಿಬಂದಿತ್ತು.

ಈ ವಿಚಾರವಾಗಿ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕೋರ್ಟ್‌ನಲ್ಲಿ ಅರಣ್ಯ ಅಧಿಕಾರಿಗಳು ವಕೀಲರ ಮೂಲಕ ವಾದ ಮಂಡಿಸಿ ಅರಣ್ಯ ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸಿದ್ದರು. ಇದನ್ನು ಮಾನ್ಯ ಮಾಡಿರುವ ನ್ಯಾಯಾಲಯ ಆರೋಪಿತ ಅಧಿಕಾರಿಗಳು ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು ಹಾಗೂ ಇತರ ಕಾರ್ಯಕ್ಕೆ ಹಂಚಿಕೆ ಮಾಡಬಾರದೆಂಬ ಅರಿವಿದ್ದರೂ, ಬೇಕೆಂದೇ ತಪ್ಪು ಎಸೆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೋರ್ಟ್ ಆದೇಶ ಹೊರಡಿಸಿದೆ.

ಅನ್ಯ ಉದ್ದೇಶಕ್ಕೆ ಬಳಕೆಗೆ ನಿರ್ಬಂಧ:

ರಕ್ಷಿತಾರಣ್ಯವನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಇದನ್ನು ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಒಂದು ವೇಳೆ ಸರ್ಕಾರದ ಇತರ ಇಲಾಖೆಗೆ ಅಗತ್ಯ ಇದ್ದಲ್ಲಿ ಅದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಅತ್ಯಗತ್ಯ. ಅದರಲ್ಲೂ ಉಪ ವಿಭಾಗಾಧಿಕಾರಿ ಅಥವಾ ಇನ್ನಿತರ ಅಧಿಕಾರಿಗಳಿಗೆ ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಪರಿವರ್ತಿಸಲು ಅಧಿಕಾರ ಇಲ್ಲ.

ಬೆಂಗಳೂರಿನ ಪ್ರಮುಖ ಭಾಗದಲ್ಲಿ ಬಹು ಬೆಲೆ ಬಾಳುವ ಅರಣ್ಯ ಭೂಮಿಯನ್ನು ಅಧಿಕಾರಿಗಳಿಬ್ಬರು ಕಂದಾಯ ಜಮೀನಾಗಿ ಬದಲಾಯಿಸಿರುವುದು ಅಕ್ಷಮ್ಯ ಅಪರಾಧ. ಇದರ ವಿರುದ್ಧ ಇಲಾಖೆ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಮಾಡಿಕೊಟ್ಟಿದೆ. ಮುಂದೆಯೂ ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಹಿಂದೇಟು ಹಾಕದು.

- ಈಶ್ವರ್ ಖಂಡ್ರೆ, ಅರಣ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net