ಅವರ ಕಾಲದಲ್ಲಿ ಎಷ್ಟು ಮರ್ಡರ್‌ಗಳಾಗಿದ್ದವು? ಗೃಹ ಸಚಿವ ಪರಂ ಹೀಗೆಂದು ಹೇಳಿದ್ದೇಕೆ…

Parameswar Crime11
Published on

ತುಮಕೂರು; ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ ತುಮಕೂರಿನಲ್ಲಿ ಮಾಧ್ಯಮಗಳ ಮುಂದೆ ಉಡಾಫೆ ಉತ್ತರ ನೀಡಿದ್ದಾರೆ. ಅವರ (ಬಿಜೆಪಿ) ಕಾಲದಲ್ಲಿ ಎಷ್ಟು ಮರ್ಡರ್‌ಗಳಾಗಿದ್ದವು ಅಂತ ಹೇಳಿದ ಮೇಲೆಯೇ ಗೊತ್ತಾಗುತ್ತೆ. ರಾಜ್ಯ ಯಾವಾಗ ಸುರಕ್ಷೆಯಾಗಿತ್ತು ಎಂದು ಲಘುದಾಟಿಯಲ್ಲಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಪರಾಧ ಪ್ರಕರಣಗಳ ಹೆಚ್ಚಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಒಂದೊಂದು ಘಟನೆಗೆ ಒಂದೊಂದು ಕಾರಣ ಇರುತ್ತೆ. ಎಲ್ಲವನ್ನೂ ಸಾರ್ವತ್ರಿಕಗೊಳಿಸುವುದು ಸರಿಯಲ್ಲ. 2022-23 ರಲ್ಲಿ ಕ್ರೈಂ ರೇಟ್ ಎಷ್ಟಿತ್ತು? ನಾಲ್ಕು ತಿಂಗಳ ಬಗ್ಗೆ ಮಾತ್ರ ಹೇಳುವುದಲ್ಲ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇದೆ. ಇವರನ್ನು (ಬಿಜೆಪಿ) ಹೇಳಿಕೊಂಡು, ಕೇಳಿಕೊಂಡು ಸರ್ಕಾರ ಕಾನೂನು ಸುವ್ಯವಸ್ಥೆ ಮಾಡಲ್ಲ. ಏನ್ ಕ್ರಮ ಬೇಕಾದರೂ ತಗೋತಿವಿ. ಬಿಜೆಪಿಯವರು ಎಷ್ಟೇ ಕಾನೂನು ವ್ಯವಸ್ಥೆ ಹಾಳು ಮಾಡಲು ಪ್ರಯತ್ನ ಮಾಡಿದರು ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕೆ ಇದೆ. ನಾವು ಹತೋಟಿಗೆ ತರುತ್ತೇವೆ ಎಂದು ಪರಂ ಟಾಂಗ್ ಕೊಟ್ಟರು.

ಕೌಟುಂಬಿಕ ಹಿಂಸಾ ವಿಚಾರಗಳೇ ಬೇರೆ. ಸಂದರ್ಭಾನುಸಾರವಾಗಿ ಅಪರಾಧ ಕೃತ್ಯಗಳು ನಡೆದಿದ್ದು ಸಂದರ್ಭಾನುಸಾರವೇ ಉತ್ತರ ಕೊಟ್ಟಿದ್ದೇವೆ. ನಾವು ಶಾಂತಿಯನ್ನ ಕಾಪಾಡುತ್ತೇವೆ. ಯಾರು ಕಾನೂನು ವ್ಯವಸ್ಥೆ ಹಾಳು ಮಾಡಲು ಪ್ರಯತ್ನ ಮಾಡಿದರೂ ಅವರನ್ನು ಬಿಡುವುದಿಲ್ಲ. ತಕ್ಕ ಶಿಕ್ಷೆ ಕೊಡಿಸುತ್ತೇವೆ ಎಂದರು.

ದೇವರಾಜೇಗೌಡ ಅಲ್ಲೇ ಇರಬೇಕು: 100 ಕೋಟಿ ಆಮಿಷ ಒಡ್ಡಿದ್ದಾರೆಂಬ ಹಾಸನ ಮೂಲದ ವಕೀಲ ದೇವರಾಜೇಗೌಡ ಆರೋಪಕ್ಕೆ ಸಂಬಂಧಿಸಿದ್ದನ್ನೆಲ್ಲಾ ಎಸ್‌ಐಟಿ ತಂಡ ನೋಡಿಕೊಳ್ಳಲಿದೆ. ಅದರ ಸಾಧಕ ಬಾಧಕಗಳನ್ನ ನೋಡಿ ತನಿಖೆ ಮಾಡುತ್ತಾರೆ. ನಾನು ಹೊರಗೆ ಬಂದರೆ ಸರ್ಕಾರ ಪತನ ಆಗುತ್ತೆ ಎಂಬ ದೇವರಾಜೇಗೌಡಗೆ ಹಾಗಾದ್ರೆ ಅವರು ಅಲ್ಲೇ ಇರಬೇಕಾಗುತ್ತದೆ ಎಂದು ಪರಮೇಶ್ವರ ನಸುನಕ್ಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net