

ಉಡುಪಿ: ಜಿಲ್ಲೆಯಲ್ಲಿ ಅಪಘಾತಗಳಿಂದಾಗಿ ವರ್ಷಕ್ಕೆ ಸುಮಾರು 250ಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದು, ಇದರಿಂದ 250 ಕುಟುಂಬಗಳು ತೊಂದರೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹೇಳಿದರು.
ಗುರುವಾರ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾ ಪೊಲೀಸ್, ಪೊಲೀಸ್ ಉಪ ವಿಭಾಗ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರೂ ಪೊಲೀಸರೊಂದಿಗೆ ಸಹಕರಿಸಬೇಕು. ಬೆಳೆ ಬಾಳುವ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು. ತಮ್ಮ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಬಾರದು. ಸೈಬರ್ ವಂಚನೆ ಬಗ್ಗೆ ಜಾಗೃತರಾಗಬೇಕು. ಬ್ಯಾಂಕ್ ಖಾತೆಯಿಂದ ಹಣ ಕಡಿತವಾದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಬೇಕು. ಇದರಿಂದ ಖಾತೆಯನ್ನು ಸ್ತಂಭನಗೊಳಿಸಲಾಗುವುದು. ಹಣವೂ ಸುರತವಾಗಿರುತ್ತದೆ ಎಂದರು.
ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಮಾತನಾಡಿ, ಭಾರತದಲ್ಲಿ 239 ಬಗೆಯ ಮಾದಕ ದ್ರವ್ಯಗಳನ್ನು ನಿಷೇಧಿಸಲಾಗಿದ್ದು, ಇತ್ತೀಚೆಗೆ ಚಾಕಲೇಟ್ ಮೂಲಕ ಡ್ರಗ್ ಹಂಚುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು. ಮಾದಕ ದ್ರವ್ಯ ಹಾವಳಿ ನಿಯಂತ್ರಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಸೈಬರ್ ಠಾಣೆ ಎಸ್ಐ ರಾಮಚಂದ್ರ ನಾಯಕ್ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ್ ಹೆಗಡೆ, ಹಾಸ್ಯ ನಟ ಅರವಿಂದ ಬೋಳಾರ್, ಪತ್ರಕರ್ತ ವಾಲ್ಟರ್ ನಂದಳಿಕೆ, ಮಧುವೇಹ ತಜ್ಞೆ ಡಾ. ಶ್ರುತಿ ಬಲ್ಲಾಳ್, ಮಿಸ್ ಟಾಪ್ ಮಾಡೆಲ್ ಇಂಡಿಯಾ ವಿಜೇತೆ ಸ್ಫೂರ್ತಿ ಶೆಟ್ಟಿ, ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಉಪಸ್ಥಿತರಿದ್ದರು. ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಸ್ವಾಗತಿಸಿದರು. ಅನಿತಾ ಚೇತನ್ ಕಾರ್ಯಕ್ರಮ ನಿರೂಪಿಸಿದರು.