ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

Crime prevention campaign
Published on

ಮೈಸೂರು: ಜಾಗೃತ ಪ್ರಜೆಗಳಾಗುವ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.


ನಗರ ಪೊಲೀಸ್ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ 2023ನೇ ಸಾಲಿನ ಅಪರಾಧ ತಡೆ ಮಾಸಾಚರಣೆ ಮತ್ತು ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.


ಮೈಸೂರು ಇಡೀ ರಾಜ್ಯದಲ್ಲೇ ನೆಮ್ಮದಿ ಮತ್ತು ಶಾಂತಿಯಿಂದ ಇರುವ ನಗರವಾಗಿದೆ. ಬಹುಪಾಲ ಜನರು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆ ಮತ್ತು ನಗರದಲ್ಲಿ ಯಾವುದೇ ಅಪರಾಧ ಪ್ರಕರಣ ನಡೆಯದಂತೆ ನೋಡಿಕೊಳ್ಳಬೇಕಿದೆ. ಇದಕ್ಕೆ ಜನಸಾಮಾನ್ಯರ ಸಹಕಾರವೂ ಅಗತ್ಯವಾಗಿದೆ ಎಂದರು.


ಇತ್ತೀಚೆಗೆ ಬೆಂಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ದುಷ್ಕೃತ್ಯ ಅಪರಾಧವಾಗಿದೆ. ಇದರಿಂದಾಗಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.


ಅಜಾಗರೂಕತೆಯಿಂದಲೇ ಬಹುಪಾಲು ಅಪರಾಧಗಳು ಘಟಿಸುತ್ತಿವೆ. ಮನೆಕಟ್ಟುವ ವೇಳೆ ಸೂಕ್ತ ಬಾಗಿಲು, ಕಿಟಕಿ ನಿರ್ಮಾಣ ಮಾಡದೇ ಇರುವುದು, ಪ್ರವಾಸಕ್ಕೆ ಹೋಗುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದು, ವಾಯುವಿಹಾರಕ್ಕೆ ತೆರಳುವಾಗ ಚಿನ್ನಾಭರಣ ಧರಿಸುವುದು, ವಾಹನ ಚಲಾಯಿಸುವಾಗ ಸಂಚಾರ ನಿಯಮ ಪಾಲಿಸದೇ ಇರುವುದು ಹಾಗೂ ಕಾನೂನು-ನಿಯಮಗಳನ್ನು ಅರಿಯದೇ ತಮಗಿಷ್ಟ ಬಂದಂತೆ ಅಜಾಗರೂಕತೆಯಿಂದ ವರ್ತಿಸುವುದರಿಂದ ಅಪರಾಧ ಕೃತ್ಯಗಳು ಜರುಗುತ್ತಿವೆ ಎಂದರು.


ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರೂ ಪೊಲೀಸರೊಂದಿಗೆ ಕೈಜೋಡಿಸಬೇಕು. ಜತೆಗೆ ತಮ್ಮ ವ್ಯಾಪ್ತಿಯಲ್ಲಿ ಯಾವುದಾದರೂ ಸಂಭವಿಸಬಹುದಾದ ಅಪರಾಧ ಕಂಡುಬಂದರೆ ಶೀಘ್ರವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಸಂಭವನೀಯ ಅಪರಾಧವನ್ನು ಪೊಲೀಸರು ತಡೆಯಲು ಅನುಕೂಲವಾಗುತ್ತದೆ ಎಂದರು.

ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಕಡಿಮೆ


ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಮಾತನಾಡಿ, ಮೈಸೂರು ನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 72 ಸರಗಳ್ಳತನ ಪ್ರಕರಣ ವರದಿಯಾಗಿತ್ತು. ಆದರೆ ಈ ಸಲ 12 ಪ್ರಕರಣ ವರದಿಯಾಗಿದೆ.

ಎಲ್ಲವನ್ನೂ ಪತ್ತೆ ಹಚ್ಚಲಾಗಿದೆ. ಜತೆಗೆ ಅಪರಾಧ ಪ್ರಕರಣಗಳು ಕಡಿಮೆ ಮಾಡಲು ನಮ್ಮ ಪೊಲೀಸ್ ಸಿಬ್ಬಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.


ಹೆಣ್ಣು ಭ್ರೂಣಹತ್ಯೆ ಮತ್ತು ಬಾಲ್ಯ ವಿವಾಹ ಕುರಿತು ಅರಿವು ಮೂಡಿಸಲು ಛಾಯಾದೇವಿ ಸಂಸ್ಥೆಯ ಮಕ್ಕಳು ಕಿರು ನಾಟಕವನ್ನು ಪ್ರದರ್ಶಿಸಿದರು. ಬಳಿಕ ಅವರಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.


ನಗರದ ಎಲ್ಲ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪೋಸ್ಟರ್ ಹಿಡಿದು ಜಾಥಾದಲ್ಲಿ ಭಾಗಿಯಾದರು. ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಿಂದ ಕೆ.ಆರ್.ವೃತ್ತ, ಅರಸು ರಸ್ತೆ ಮಾರ್ಗವಾಗಿ ಸಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಜಾಥಾ ಅಂತ್ಯಗೊಂಡಿತು.


ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಅಂತಾರಾಷ್ಟ್ರೀಯ ಕ್ರೀಡಾಪಟು ರೀನಾ ಜಾರ್ಜ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net