ದಸರಾ ನೋಡಲು ಬಂದ ಇಬ್ಬರು ಸಾವು

accident-15
Published on

ಒಬ್ಬ ಆತ್ಮಹತ್ಯೆಗೆ ಶರಣು
ಸುಂಟಿಕೊಪ್ಪ: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತರಾದ ಪ್ರಕರಣ ವರದಿಯಾಗಿದೆ. ಹಾಸನ ಜಿಲ್ಲೆಯ ಅರಸಿಕೆರೆಯಿಂದ ಮಡಿಕೇರಿ ದಸರಾ ವೀಕ್ಷಣೆಗೆಂದು ಬೈಕಿನಲ್ಲಿ ಬಂದಿದ್ದ ಗೋಪಿನಾಥ್ (31) ಶನಿವಾರ ತಡರಾತ್ರಿ ಅಪಘಾತದಲ್ಲಿ ಮೃತರಾಗಿದ್ದಾರೆ.
ಗದ್ದೆಹಳ್ಳದ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಸಂದರ್ಭ ಹಿಂಬದಿ ಸವಾರರಾಗಿದ್ದ ಗೋಪಿನಾಥ್ ಅವರು ರಸ್ತೆ ಬದಿಗೆ ಬಿದ್ದರು. ತೀವ್ರ ರಕ್ತಸ್ರಾವದ ಹಿನ್ನ್ನೆಲೆಯಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದರು. ತೀವ್ರ ಗಾಯಗೊಂಡ ಬೈಕ್ ಸವಾರನನ್ನು ಮಡಿಕೇರಿ ಜಿಲ್ಲಾಸ್ಪತ್ರೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕ ದುರ್ಮರಣ: ಮಡಿಕೇರಿ ದಸರಾ ಮೆರವಣಿಗೆ ವೀಕ್ಷಿಸಿ ಶನಿವಾರ ರಾತ್ರಿ ಹುಣಸೂರಿಗೆ ವಾಪಸ್ ಬರುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಉರುಳಿದ ಕಾರಣ ಹುಣಸೂರು ಚಂದನ್ (21) ಸ್ಥಳದಲ್ಲೇ ಮೃತರಾಗಿದ್ದಾರೆ. ಇತರ 8 ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆತ್ಮಹತ್ಯೆ: ಕಂಬಿಬಾಣೆ ಆಟೋಚಾಲಕ ಸುದೀಶ್ (45) ಎಂಬಾತ ಕಂಬಿಬಾಣೆಯಲ್ಲಿ ದಸರಾ ಸಮಾರಂಭ ಮುಗಿಸಿ ಮನೆಗೆ ತೆರಳಿ ನೇಣು ಬಿಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಕಾರಣ ತಿಳಿದುಬಂದಿಲ್ಲ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಚ್.ವಿ.ಚಂದ್ರಶೇಖರ್ ಮೂರೂ ಪ್ರಕರಣದ ಸ್ಥಳಕ್ಕೆ
ಸಿಬ್ಬಂದಿಯೊಂದಿಗೆ ತೆರಳಿ, ಮಹಜರ್ ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net