ತಂದೆಯನ್ನು ಕೊಂದ ಮಗನ ಬಂಧನ, 2 ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದ ಆರೋಪಿ

dayananda
Published on

ಬೆಳ್ತಂಗಡಿ: ವಾಕಿಂಗ್‌ಗೆ ತೆರಳಿದ್ದ ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ನಿವಾಸಿ, ಕಾರು ಚಾಲಕ ವಾಸು ಸಫಲ್ಯ (66)ಅವರನ್ನು 24ರಂದು ಕೊಲೆ ಮಾಡಿದ್ದ ಆರೋಪಿ ಪುತ್ರ ದಯಾನಂದ ಸಫಲ್ಯ(37)ನನ್ನು ಬೆಳ್ತಂಗಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಘಟನೆ ಬಳಿಕ ನಾಪತ್ತೆಯಾಗಿದ್ದ ಆರೋಫಿ ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಿದ್ದ. ಈತನನ್ನು ಸೈಬರ್ ಕ್ರೈಂ ಇನ್ವೆಸ್ಟಿಗೇಶನ್ ಮೂಲಕ ಮಂಗಳೂರಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಲೆ ಬಳಿಕ ಮಂಗಳೂರಿನಲ್ಲಿ ಉದ್ಯಮಿಯೊಬ್ಬರ ಜತೆ ಚಾಲಕನಾಗಿ ಸೇರಿಕೊಂಡಿದ್ದ.

ಬಂಧಿತ ಆರೋಪಿ ಪೊಲೀಸ್ ತನಿಖೆ ವೇಳೆ ಬೆಚ್ಚಿಬೀಳುವ ಸಂಗತಿಗಳನ್ನು ಹೇಳಿ, ತಪ್ಪೊಪ್ಪಿಕೊಂಡಿದ್ದಾನೆ. ತಂದೆ ಪ್ರತಿದಿನ ಉದ್ಯೋಗ, ಆರ್ಥಿಕ ವಿಚಾರದ ಬಗ್ಗೆ ಕಿರಿಕಿರಿ ಮಾಡುತ್ತಿದ್ದರು. ಅದಕ್ಕಾಗಿ ಅವರ ಕೊಲೆ ಮಾಡಬೇಕೆಂದು ಎರಡು ತಿಂಗಳ ಹಿಂದೆಯೇ ತೀರ್ಮಾನಿಸಿ ಅವಕಾಶಕ್ಕಾಗಿ ಹೊಂಚು ಹಾಕುತ್ತಿದ್ದೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ಪ್ರಕರಣದ ತನಿಖಾಧಿಕಾರಿಯಾಗಿದ್ದ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಪತ್ತೆ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net