ಜಾನುವಾರು ಅಕ್ರಮ ಸಾಗಾಟ, ನಾಲ್ವರ ಸೆರೆ

go
Published on

ಕೋಟ: ಹರಿಯಾಣದಿಂದ ಕೇರಳಕ್ಕೆ 59 ಕೋಣಗಳನ್ನು ಕಂಟೇನರ್‌ನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಕೋಟ ಠಾಣಾ ವ್ಯಾಪ್ತಿಯ ಸಾಯಿಬ್ರಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಅಬ್ದುಲ್ ಜಬ್ಬಾರ್(35), ಜೋಮುನ್ (36), ಸಂಶುದ್ದೀನ್ (34), ಹರಿಯಾಣ ಮೂಲದ ಮುಖೀಮ್ (18) ಬಂಧಿತರು. 8 ಲಕ್ಷ ರೂ.ಕಂಟೇನರ್ ಲಾರಿ ಹಾಗೂ 2 ಲಕ್ಷ ಮೌಲ್ಯದ ಎಮ್ಮೆ ಕರುಗಳು ಮತ್ತು ಕಟ್ಟಲು ಉಪಯೋಗಿಸಿದ ನೈಲಾನ್ ಹಗ್ಗವನ್ನು ವಶಕ್ಕೆ ಪಡೆಯಲಾಗಿದೆ. ರಕ್ಷಿಸಲ್ಪಟ್ಟ ಕೋಣಗಳನ್ನು ನೀಲಾವರ ಗೋ ಶಾಲೆಗೆ ಕಳುಹಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕೋಟ ಠಾಣೆ ಪ್ರೊಬೆಷನಲ್ ಪಿಎಸ್‌ಐ ಸಂತೋಷ್ ಬಿ.ಪಿ. ಅವರು ಸಿಬ್ಬಂದಿ ಜತೆ ಟ್ರಕ್ ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಎಮ್ಮೆ ಕರುಗಳ ಮಾಲೀಕ ಕೇರಳದ ಅಬ್ದುಲ್ ಅಜೀಜ್ ಹಾಗೂ ಕಂಟೇನರ್ ಮಾಲೀಕ ಮೈಸೂರು ಮೂಲದ ರಫೀಕ್ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್ ಬಿ. ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net