

ಮೈಸೂರು: ಲಕ್ಷ್ಮೀಕಾಂತನಗರದಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಕಸಿಯಲು ಯತ್ನಿದ ಖದೀಮನೊಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಬ್ಯಾಲದಕೆರೆ ಗ್ರಾಮದ ನಿವಾಸಿ ನಿಶಾಂತ್ ಬಂಧಿತ ಆರೋಪಿ. ಈತ ಜ.22 ರಂದು ಲಕ್ಷ್ಮೀಕಾಂತನಗರದ ನಾಗಮ್ಮ ಅವರ ಸರ ಕಸಿದು ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದರು.
ನಾಗಮ್ಮ ಅವರು ಲಕ್ಷ್ಮೀಕಾಂತನಗರದ ಮಾರಮ್ಮ ದೇವಾಲಯದ ಬಳಿ ಇರುವ ತಂಗಿಯ ಮನೆಗೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಹಿಂಬದಿಯಿಂದ ಆಗಮಿಸಿದ ನಿಶಾಂತ್ ಸರ ಕಸಿಯಲು ಯತ್ನಿಸಿದ. ಈ ಸಂದರ್ಭ ನಾಗಮ್ಮ ಕೂಗಿಕೊಂಡಾಗ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಸೆರೆ ಹಿಡಿದರು. ನಾಗಮ್ಮ ಅವರು ಚಿನ್ನದ ಬಣ್ಣವನ್ನು ಹೋಲುವ ಸರವನ್ನು ಧರಿಸಿದ್ದರು. ನಾಗಮ್ಮ ಧರಿಸಿರುವುದು ಚಿನ್ನದ ಸರ ಎಂದು ಭಾವಿಸಿ ಕದಿಯಲು ಯತ್ನಿಸಿದ ನಿಶಾಂತ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ