ಮೈಸೂರಿನಲ್ಲಿ ವ್ಯಕ್ತಿ ಹತ್ಯೆಗೆ ಯತ್ನ: ನಾಲ್ವರ ಬಂಧನ

Crime Logo
Published on

ಮೈಸೂರು: ನಗರದ ದೇವರಾಜ ಪೊಲೀಸ್ ಠಾಣೆ ಹಿಂಭಾಗದ ಟೀ ಅಂಗಡಿಯ ಬಳಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಆವಲಹಳ್ಳಿ ನಿವಾಸಿ ಸಯ್ಯದ್ ಹಬೀಬ್ ಅಲಿಯಾಸ್ ಸುಕ್ಕ ಹತ್ಯೆಗೆ ಯತ್ನಿಸಿದ್ದ ಬೆಂಗಳೂರಿನ ಮುನ್ನ, ಅಬ್ದುಲ್ಲ, ಮೈಸೂರಿನ ಯರಗನಹಳ್ಳಿಯ ಅಭಯ್, ಜೀಸಾನ್ ಬಂಧಿತರು. ಇವರ ಬಂಧನದೊಂದಿಗೆ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಮತ್ತಿಬ್ಬರು ಅರೋಪಿಗಳಾದ ನಗರದ ಇಮ್ರಾನ್ ಹಾಗೂ ಗೌತಮ್ ಎಂಬವರನ್ನು ಈ ಮೊದಲು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಸಯ್ಯದ್ ಹಬೀಬ್ ಮೂಲತಃ ಮೈಸೂರಿನ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗೂರಿನಲ್ಲಿ ನೆಲೆಸಿದ್ದ. ಸಯ್ಯದ್ ಹಬೀಬ್ ಡಿ.12 ರಂದು ನ್ಯಾಯಾಲಯದ ಪ್ರಕರಣವೊಂದರ ಸಂಬಂಧ ಸ್ನೇಹಿತ ರಫೀಕ್ ಅಹಮ್ಮದ್ ಜಿಲಾಲ್‌ನೊಂದಿಗೆ ಮೈಸೂರಿಗೆ ಆಗಮಿಸಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯಗೊಂಡು ಸ್ನೇಹಿತರೊಂದಿಗೆ ದೇವರಾಜ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಟೀ ಅಂಗಡಿಯಲ್ಲಿ ಕುಳಿತಿದ ಸಂದರ್ಭ ಕಾರಿಲ್ಲಿ ಆಗಮಿಸಿದ ಗುಂಪೊಂದು ಮಚ್ಚುಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು.

ಸಯ್ಯದ್ ಹಬೀಬ್ ಮೈಸೂರಿನಲ್ಲಿದ್ದ ಸಂದರ್ಭ ಈ ಗುಂಪಿನೊಂದಿಗೆ ಘರ್ಷಣೆ ನಡೆದಿತ್ತು. ಅದಾದ ನಂತರ ಸಯ್ಯದ್ ಹಬೀಬ್ ಬೆಂಗಳೂರಿಗೆ ತೆರಳಿ ನೆಲೆಸಿದ್ದ. ಹಳೆಯ ಧ್ವೇಷದಿಂದ ಸಯ್ಯದ್ ಹಬೀಬ್ ಮೇಲೆ ದಾಳಿ ನಡೆದಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net