

ಮಂಡ್ಯ: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ ಪಡೆದು ವಂಚನೆ ಮಾಡಿದ್ದವನನ್ನು ಜಿಲ್ಲಾ ಅಪರಾಧ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೆ ಆತನಿಂದ ನಗದು, ಚಿನ್ನಾಭರಣ ಸೇರಿದಂತೆ 16 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯ ತಾಲೂಕಿನ ಮಧು ಬಂಧಿತ ಆರೋಪಿ. ಈತನಿಂದ ಮದ್ದೂರು ತಾಲೂಕಿನ ಯುವತಿಯಿಂದ ಹಣ ಪಡೆದು ಮೋಸ ಮಾಡಿದ್ದನು. ಯುವತಿ ಲಿಂಗಾಯತ್ ಮ್ಯಾಟ್ರಿಮೋನಿ.ಕಾಂನಲ್ಲಿ ತನ್ನ ಮಾಹಿತಿ ಅಪ್‌ಲೋಡ್ ಮಾಡಿದ್ದರು. ಅಲ್ಲಿ ಆಕೆಯ ಮಾಹಿತಿ ಪಡೆದಿರುವ ಆರೋಪಿ ಯುವತಿಯನ್ನು ಪರಿಚಯ ಮಾಡಿಕೊಂಡು ತಾನು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ. ಅದನ್ನು ನಂಬಿದ ಯುವತಿ ಹಣ ನೀಡಿದ್ದಾಳೆ. ಬಳಿಕ ಮದುವೆಯಾಗುವುದಾಗಿ ಹೇಳಿ ಜತೆಗೆ ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡಿದರೆ ಜೀವನ ಸುಗಮವಾಗಿ ನಡೆಯಲಿದೆ ಎಂದು ನಂಬಿಸಿದ್ದಾನೆ.
ಈತನ ಮಾತುಗಳನ್ನು ನಂಬಿದ ಯುವತಿಗೆ ಆರೋಪಿ ಕೆಲ ಕಾರಣಗಳನ್ನು ನೀಡಿ ಹಂತ ಹಂತವಾಗಿ ಫೋನ್ ಪೇ, ಗೂಗಲ್ ಪೇ ಹಾಗೂ ಇತರೆ ಆನ್‌ಲೈನ್ ಪೇಮೆಂಟ್ ಮೂಲಕ ಆತನ ಮತ್ತು ಆತನ ಪರಿಚಯಸ್ಥರು ಹಾಗೂ ಸ್ನೇಹಿತರ ಖಾತೆಗಳಿಗೆ 31,34,300 ರೂ ಪಡೆದಿದ್ದಾನೆ. ಆದರೆ ಕೆಲಸದ ಬಗ್ಗೆ ಕೇಳಿದಾಗ ಬೇರೆ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾ ಸತಾಯಿಸಿದ್ದಾನೆ. ಯಾವಾಗ ಕೆಲಸ ಕೊಡಿಸಲಿಲ್ಲವೋ ಮೋಸ ಹೋದ ಯುವತಿಯು ಮಾ.29ರಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಅಪರಾಧ ವಿಭಾಗದ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎನ್.ಜಯಕುಮಾರ್ ಅವರ ನೇತೃತ್ವದಲ್ಲಿ ಮಂಡ್ಯ ತಾಲೂಕಿನ ಗ್ರಾಮವೊಂದರಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆತನ ಬಳಿಯಿದ್ದ 10 ಲಕ್ಷ ರೂ ನಗದು, 2.34 ಲಕ್ಷ ರೂ ಮೌಲ್ಯದ 37 ಗ್ರಾಂ ತೂಕದ ಮೂರು ಚಿನ್ನದ ಉಂಗುರ, 1.30 ಲಕ್ಷ ರೂ ಮೌಲ್ಯದ ಒಂದು ಐ ಫೋನ್, ಒಂದು ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಆರೋಪಿ ಇದೇ ರೀತಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಲವರನ್ನು ನಂಬಿಸಿ ಮೋಸ ಮಾಡಿರುವ ಬಗ್ಗೆ ಮೈಸೂರಿನ ಸಿಇಎನ್ ಪೊಲೀಸ್ ಠಾಣೆ, ದಾವಣಗೆರೆ ಪೊಲೀಸ್ ಠಾಣೆ, ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆ, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಆರೋಪಿ ಪತ್ತೆ ತನಿಖಾ ತಂಡದಲ್ಲಿದ್ದ ಪಿಐಎಸ್‌ಗಳಾದ ರಸೂಲಸಾಬ ಎಂ.ಗೌಂಡಿ, ರಾಘವೇಂದ್ರ ಎಂ.ಕಠಾರಿ, ಎಎಸ್‌ಐ ಧನಪಾಲ ಹಾಗೂ ಸಿಬ್ಬಂದಿ ಎ.ಎಂ.ರಾಜೇಅರಸ್, ಸಿ.ಟಿ.ಆನಂದ, ಇ.ಎನ್.ಶಂಕರೇಗೌಡ, ಎಸ್.ಗಿರೀಶ್, ಟಿ.ಪಿ.ರಾಜೀವ್, ಮಂಜುನಾಥ್, ರವಿಕಿರಣ್, ಲೋಕೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅಭಿನಂದಿಸಿದ್ದಾರೆ.