ದ್ವಿಚಕ್ರ ವಾಹನ ಕಳ್ಳನ ಬಂಧನ: ಬಸರಾಳು ಪೊಲೀಸರ ಕಾರ್ಯಾಚರಣೆ

24_11_Mdy_03(Crime)
Published on

ಮಂಡ್ಯ: ವಿವಿಧೆಡೆ ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಅಂತರ ಜಿಲ್ಲಾ ಕಳ್ಳನನ್ನು ಬಸರಾಳು ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ ಐದು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಎಚ್.ಡಿ.ಕೋಟೆ ತಾಲೂಕು ಬಡಗಲಪುರ ಗ್ರಾಮದ ಜಯರಾಂ (24) ಬಂಧಿತ ಆರೋಪಿ. ಜು.3ರಂದು ಮದ್ದೂರು ತಾಲೂಕು ಕೊಪ್ಪಕ್ಕೆ ಗಾರೆ ಕೆಲಸಕ್ಕೆಂದು ಎಚ್.ಡಿ.ಕೋಟೆ ತಾಲೂಕು ಮೂಲದ ಅಭಿಷೇಕ್ ಎಂಬಾತ ಬೈಕ್‌ನಲ್ಲಿ ತೆರಳುತ್ತಿದ್ದ. ಮಾರ್ಗಮಧ್ಯೆ ಜಯರಾಂನನ್ನು ನೋಡಿದ ಅಭಿಷೇಕ್ ಕೊಪ್ಪಕ್ಕೆ ಹೋಗುವ ರಸ್ತೆ ಬಗ್ಗೆ ವಿಚಾರಿಸಿದ್ದಾನೆ. ತಾನೂ ಅಲ್ಲಿಗೇ ಹೋಗುತ್ತಿದ್ದೇನೆ. ನನ್ನನ್ನೂ ಕರೆದೊಯ್ಯುವಂತೆ ಆತ ಕೇಳಿಕೊಂಡ ಕಾರಣ ಆತನನ್ನು ಹಿಂಬದಿ ಕೂರಿಸಿಕೊಂಡು ಹೊರಟಿದ್ದ.

ಮಾರ್ಗಮಧ್ಯೆ ಬಹಿರ್ದೆಸೆಗೆಂದು ಬೈಕ್ ನಿಲ್ಲಿಸಿ, ಪೌಚ್‌ನಲ್ಲೇ ಮೊಬೈಲ್ ಅನ್ನು ಇಟ್ಟು ರಸ್ತೆ ಬದಿಗೆ ಅಭಿಷೇಕ್ ತೆರಳಿದ್ದ. ವಾಪಸ್ ಬಂದು ನೋಡಿದಾಗ ತನ್ನ ಬೈಕ್ ಮತ್ತು ವ್ಯಕ್ತಿ ಇರಲಿಲ್ಲ. ತಕ್ಷಣ ಬೆಸಗರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ನ.21ರಂದು ಬಜಾಜ್ ಪಲ್ಸರ್ ಬೈಕ್‌ನ್ನು ತಳ್ಳಿಕೊಂಡು ಹೋಗುತ್ತಿದ್ದಾಗ ಆತನನ್ನು ಅಡ್ಡಗಟ್ಟಿ ಹಿಡಿಯಲು ಹೋದ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಬೆನ್ನಟ್ಟಿದ ಪೊಲೀಸರು ಆತನನ್ನು ಹಿಡಿದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂತು.

ಆರೋಪಿ ಬಸರಾಳು, ಹಾಸನ ಜಿಲ್ಲೆಯ ಹಿರಿಸಾವೆ, ಬೆಂಗಳೂರಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂತು. ಆರೋಪಿ ನೀಡಿದ ಸುಳಿವಿನ ಮೇರೆಗೆ 8.5 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖಾ ತಂಡದಲ್ಲಿದ್ದ ಬಸರಾಳು ಪಿಎಸ್‌ಐ ಮಲ್ಲಪ್ಪ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net