

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬೇಕಾಬಿಟ್ಟಿ ಹೇಳಿಕೆಗಳಿಂದ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಕಲಬುರಗಿಯಲ್ಲಿ ಸಿರಿಯಾ, ಇರಾನ್, ಇರಾಕ್ ಮಾದರಿಯಲ್ಲಿ ಮರ್ಮಾಂಗಕ್ಕೆ ಒದ್ದು, ಶಾಕ್ ಟ್ರೀಟ್ಮೆಂಟ್ ನೀಡುವ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ ಎಂದು ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಿಡಿ ಕಾರಿದರು.
ಕಲಬುರಗಿ ಭಯೋತ್ಪಾದಕ ತಾಣವಾಗಿ ಮಾರ್ಪಟ್ಟಿದ್ದು, ಕೋಟನೂರ, ಲಾಡಮುಗಳಿ ಘಟನೆ ಮರೆ ಮಾಚುವ ಮುನ್ನವೇ ನಗರದಲ್ಲಿ ಅನಾಗರಿಕ ಸಂಸ್ಕೃತಿಯ, ಪೈಶಾಚಿಕ ಕೃತ್ಯ ನಡೆದಿದೆ. ಹೊಟ್ಟೆ ಪಾಡಿಗಾಗಿ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ವ್ಯಾಪಾರ ಮಾಡುತ್ತಿದ್ದ ಅರ್ಜುನ್‌ಗೆ ದಲಿತ ಸಂಘಟನೆಯ ರಮೇಶ ದೊಡ್ಡಮನಿ, ಇಮ್ರಾನ ಮತ್ತೀತರರು ಸೇರಿ ನಗ್ನಗೊಳಿಸಿ ಮಾರಣಾಂತಿಕ ಹಲ್ಲೆ ಮಾಡಿ, ಕರೆಂಟ್ ಶಾಕ್ ಕೊಟ್ಟಿರುವುದು ಇಡೀ ಸಮಾಜ ತಲೆ ತಗ್ಗಿಸುವಂತಹ ವಿಷಯ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಾಗರಗಾ ಕ್ರಾಸ್ ಬಳಿ ಮನೆಯೊಂದರಲ್ಲಿ ಮುಸ್ಲಿಂ ಗುಂಡಾಪಡೆಯು ೧೦ ಲಕ್ಷ ರೂ. ನೀಡಬೇಕು, ಪ್ರತಿ ತಿಂಗಳು ಒಂದು ಲಕ್ಷ ರೂ. ನೀಡಬೇಕು ಎಂದು ಒತ್ತಡ ಹೇರಿ ಮಚ್ಚುಗಳಿಂದ ದಾಳಿ ಮಾಡಿ, ಮರ್ಮಾಂಗಕ್ಕೆ ಸ್ಟನ್ ಗನ್ ಮೂಲಕ ಶಾಕ್ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಹೇಳಿದರು.
ಕೆಲ ಕಾಂಗ್ರೆಸ್ ನಾಯಕರು ಸಣ್ಣ ಪುಟ್ಟ ಘಟನೆಗೂ ಕಣ್ಣೀರು ಸುರಿಸುತ್ತಿದ್ದವರು ಈಗ ಎಲ್ಲಿ ಅಡಗಿದ್ದಾರೋ ತಿಳಿಯುತ್ತಿಲ್ಲ. ಇಂತಹ ದೃಶ್ಯ ತಾಲಿಬಾನ್, ಇರಾನ್, ಇರಾಕ್, ಸಿರಿಯಾದಲ್ಲಿ ನಡೆಯುತ್ತೆ ಎಂದು ಕೇಳಿದ್ದೇವು ಇದೀಗ ನಮ್ಮಲ್ಲಿ ನಡೆಯುತ್ತಿದೆ. ಚಿತ್ತಾಪುರ ತಾಲೂಕಿನ ರಾವೂರಿನಲ್ಲಿ ವೈದ್ಯನ ಬಾಯಿಗೆ ಬಟ್ಟೆ ತುರುಕಿ ಮಾರಣಾಂತಿಕವಾಗಿ ಹೊಡೆದಿದ್ದಾರೆ. ಆದರೆ ನಮ್ಮ ಉಸ್ತುವಾರಿ ಸಚಿವರು ಏನು ಮಾತನಾಡುತ್ತಿಲ್ಲ ಎಂದು ಹೇಳಿದರು. ದುಡಿಯುವವರನ್ನು ಗುರಿಯಾಗಿಟ್ಟು, ಮುಂಬೈನಲ್ಲಿನ ಡಾನ್, ಮಾಫಿಯಾ ಮಾದರಿ ಜಿಲ್ಲೆಯಲ್ಲಿ ನಡೆದಿದೆ. ಆಳುವ ನಾಯಕರ ಮನಸ್ಥಿತಿಯೇ ಇದಕ್ಕೆ ಕಾರಣ ಎಂದರು.
ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ವಿಠಲ್ ದೊದ್ದಿ, ಶಿವಕುಮಾರ ತೇಲ್ಕೂರ ಪಾಟೀಲ್, ಅರ್ಜುನಪ್ಪ, ರುಕ್ಮಣ್ಣ ಮಡಿವಾಳ, ಮೌನೇಶ ಬಡಿಗೇರ, ರವಿಕುಮಾರ ಶಹಾಪುರ ಇದ್ದರು.
ಕಾಂಗ್ರೆಸ್ ಅಭ್ಯರ್ಥಿಗೆ ಸಾಥ್‌ಗೆ ಹೈಡ್ ಮಾಡಿದ ಕಮೀಷನರ್: ಇಂತಹ ಭೀಬತ್ಸ ಘಟನೆಗಳು ನಡೆದರೂ ನಗರ ಪೊಲೀಸ್ ಕಮೀಷನರ್ ಆರ್.ಚೇತನ್ ಏನು ಮಾಡ್ತಾ ಇದ್ದಾರೆ?. ಮೇ ೪, ೫ರಂದೇ ಘಟನೆ ನಡೆದರೂ ಮಾಧ್ಯಮಗಳಿಂದ ಮುಚ್ಚಿಟ್ಟು, ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಮೀಷನರ್‌ಗೆ ಕೆಲಸ ಮಾಡುವುದು ಬಿಟ್ಟು ಕಾಂಗ್ರೆಸ್‌ನ ಬಾಲಂಗೋಚಿಯಾಗಿ ಹೋಗಲಿ. ಮಾನ ಮರ್ಯಾದೆ ಇದ್ದರೆ ಕಮೀಷನರ್ ಕಲಬುರಗಿ ಬಿಟ್ಟು ಹೋಗಲಿ ಎಂದು ಸಿದ್ಧಲಿಂಗ ಸ್ವಾಮೀಜಿ ವಾಗ್ದಾಳಿ ನಡೆಸಿದರು.