

ಮಳವಳ್ಳಿ: ಪಟ್ಟಣದ ಬ್ಯಾಂಕ್‌ಗಳಲ್ಲಿ ಹಣ ಡ್ರಾ ಮಾಡಿಕೊಂಡು ಗುರುವಾರ ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆ ಸೆಳೆದು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 5.5 ಲಕ್ಷ ರೂ. ಇದ್ದ ಬ್ಯಾಗ್ ದೋಚಿಕೊಂಡು ಪರಾರಿಯಾಗಿದ್ದಾರೆ.
ತಾಲೂಕಿನ ಕ್ಯಾತೇಗೌಡನದೊಡ್ಡಿಯ ಕೆಂಪೇಗೌಡ ಹಣ ಕಳೆದುಕೊಂಡ ವ್ಯಕ್ತಿ. ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 2.5 ಲಕ್ಷ ರೂ. ಹಾಗೂ ಕೆನರಾ ಬ್ಯಾಂಕ್‌ನಿಂದ 7.5 ಲಕ್ಷ ರೂ. ಸೇರಿ ಒಟ್ಟು 10 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾರೆ. ಇದರಲ್ಲಿ 4.5 ಲಕ್ಷ ಹಣವನ್ನು ವಿಂಗಡಿಸಿ ಕಾರಿನ ಡ್ಯಾಷ್ ಬೋರ್ಡ್‌ನಲ್ಲಿ ಇರಿಸಿ ಉಳಿದ 5.5 ಲಕ್ಷ ರೂ.ಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದರು.
ಪಟ್ಟಣದ ಬಸ್ ನಿಲ್ದಾಣದ ಪಕ್ಕದ ಅಂಬೇಡ್ಕರ್ ಭವನದ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಇವರನ್ನು ಹಿಂಬದಿಯಿಂದ ಹೆಲ್ಮೆಟ್ ಧರಿಸಿಕೊಂಡು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬಾಟಲ್‌ನಲ್ಲಿ ತಂದಿದ್ದ ಆಯಿಲ್ ಅನ್ನು ಕಾರಿನ ಹಿಂಬದಿಯ ಕೆಳಭಾಗಕ್ಕೆ ಎರಚಿ ಮುಂದೆ ಸಾಗಿದ್ದಾರೆ. ಸಿದ್ಧಾರ್ಥ ಪದವಿಪೂರ್ವ ಕಾಲೇಜು ಬಳಿ ಕಾರು ಅಡ್ಡಗಟ್ಟಿ ನಿಮ್ಮ ಕಾರಿನಿಂದ ಇಂಧನ ಸೋರಿಕೆಯಾಗುತ್ತಿದೆ ಎಂದಿದ್ದಾರೆ.
ಈ ವೇಳೆ ಕೆಂಪೇಗೌಡ ಅವರು ನಿಲ್ಲಿಸಿ ಕೆಳಗಿಳಿದು ಕಾರಿನ ಕೆಳಭಾಗವನ್ನು ನೋಡುತ್ತಿದ್ದಾಗ ಸೀಟಿನ ಮೇಲೆ ಇರಿಸಿದ್ದ 5.5 ಲಕ್ಷ ರೂ. ಇದ್ದ ಚೀಲವನ್ನು ಎಗರಿಸಿ ಪರಾರಿಯಾಗಿದ್ದಾರೆ. ತಾವು ಮೋಸ ಹೋಗಿರುವುದು ಮನವರಿಕೆಯಾಗುತ್ತಿದ್ದಂತೆ ಕೂಡಲೇ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಕಾರ್ಯಕ್ಕೆ ತನಿಖೆ ಕೈಗೊಂಡಿದ್ದಾರೆ.