ಅಪರಾಧ ಪ್ರಕರಣ ಪತ್ತೆಗೆ 24 ಗಂಟೆಯೂ ಶ್ರಮಿಸಿ: ಪೂರ್ವವಲಯ ಐಜಿಪಿ ತ್ಯಾಗರಾಜನ್ ಸೂಚನೆ

HNL POLICE 21 (2)
Published on

ಹೊನ್ನಾಳಿ: ಅಪರಾಧ ಪ್ರಕರಣ ಪತ್ತೆಗೆ ಸಿಬ್ಬಂದಿ ದಿನದ 24 ಗಂಟೆಯೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಪೂರ್ವವಲಯ ಐಜಿಪಿ ತ್ಯಾಗರಾಜನ್ ಸೂಚನೆ ನೀಡಿದರು.

ಇಲ್ಲಿನ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿ ಮಾತನಾಡಿ, ಹಿಂದೆ ಅಪರಾಧಗಳು ನಡೆದಾಗ ಆರೋಪಿಗಳ ಪತ್ತೆ ಸ್ವಲ್ಪ ಸಮಯ ಹಿಡಿಯುತ್ತಿತ್ತು. ಈಗ ಇಲಾಖೆಯಲ್ಲಿ ಅನುಭವಿ ಪೊಲೀಸ್ ಅಧಿಕಾರಿಗಳು ಹಾಗೂ ಅತ್ಯಾಧುನಿಕ ಪರಿಕರಗಳಿರುವ ಕಾರಣ ಪ್ರಕರಣ ಭೇದಿಸುವುದು ಕಷ್ಟವೇನಲ್ಲ ಎಂದರು.

ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಕೆರೆಯಲಾಗುತ್ತಿದ್ದು, ಅಲ್ಲಿ ಠಾಣೆ ಪ್ರಾರಂಭಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜನಸಂಖ್ಯೆ ಹಾಗೂ ಕ್ರೈಂಗಳ ಸರಾಸರಿಗೆ ಅನುಗುಣವಾಗಿ ಠಾಣೆ ಅಥವಾ ಉಪಠಾಣೆ ಮಂಜೂರು ಮಾಡಲಾಗುತ್ತಿದೆ. ಆದರೂ ಇಲ್ಲಿ ಒಂದು ಉಪಠಾಣೆ ಮಂಜೂರು ಮಾಡುವಂತೆ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ತಿಳಿದಿದ್ದು, ಸಮಸ್ಯೆ ನೀಗಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು. ಎಸ್ಪಿ ರಿಷ್ಯಂತ್, ಡಿವೈಎಸ್ಪಿ ಡಾ.ಸಂತೋಷ್, ಸಿಪಿಐ ದೇವರಾಜ್, ನ್ಯಾಮತಿ ಪಿಎಸೈ ರಮೇಶ್, ಎಎಸ್ ಪರಶುರಾಮ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net