

ಹಳಿಯಾಳ: ದಲಿತ ಯುವಕನನ್ನು ಅಪಹರಿಸಿ ಮನೆಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ತನ್ನ ಮಗನನ್ನು ಅಪಹರಿಸಿ ಮನೆಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಹಳಿಯಾಳ ಮತ್ತು ಅಳ್ಳಾವರ ಗಡಿ ಭಾಗದಲ್ಲಿರುವ ಪುರ ಗ್ರಾಮದ ದಲಿತ ಯುವಕ ದೀಪಕ ಸಾಠೆ ತಾಯಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನ್ನ ಮಗ ಕೂಲಿ ಕಾರ್ಮಿಕನಾಗಿದ್ದು ಕಳೆದ ಕೆಲವು ತಿಂಗಳ ಹಿಂದಷ್ಟೇ ಹಳಿಯಾಳದ ಗೋಪಾಲ ಮಿರಾಶಿ ಅವರಿಂದ ಕಟ್ಟಡ ನಿರ್ಮಾಣ ಕೆಲಸಕ್ಕೆ ಬರುವುದಾಗಿ ಮುಂಗಡ ಹಣ ಪಡೆದಿದ್ದ. ನಂತರದ ದಿನಗಳಲ್ಲಿ ಹಂತ ಹಂತವಾಗಿ ಹಣ ಮರಳಿಸಿದ್ದು ಇನ್ನುಳಿದ ಬಾಕಿ ಹಣ ನೀಡಲು ವಿಳಂಬವಾಗಿದೆ.
ಈ ಕ್ಷುಲ್ಲಕ ಕಾರಣಕ್ಕೆ ಆರೋಪಿ ಗೋಪಾಲ ಮಿರಾಶಿ ತನ್ನ ಮಗ ತೇರಗಾಂವ ಗ್ರಾಮದಲ್ಲಿ ಕೆಲಸದಲ್ಲಿದ್ದ ಸಂದರ್ಭದಲ್ಲಿ ಆರೋಪಿ ತನ್ನ ಕಾರಿನಲ್ಲಿ ಅಪಹರಿಸಿ ಅವರ ಮನೆಯಲ್ಲಿ ಕೂಡಿ ಹಾಕಿ, ಮನೆಗೆ ಬೀಗ ಜಡಿದು ಮಿರಾಶಿ ಪತ್ನಿ ಅಕ್ಷತಾ, ಮಾವ ತುಕಾರಾಮ ಸೇರಿದಂತೆ ಒಟ್ಟು ನಾಲ್ವರು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಏತನ್ಮಧ್ಯೆ, ಹಣ ನೀಡುವುದಾಗಿ ಮನವಿ ಮಾಡಿ ಹಲ್ಲೆಗೊಳಗಾದ ವ್ಯಕ್ತಿಯು ತನ್ನ ಸ್ನೇಹಿತನನ್ನು ಕರೆಯಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಲಾರಿ ಡಿಕ್ಕಿಯಾಗಿ ಚಾಲಕರಿಗೆ ಗಾಯ
ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲು: ಯುವಕನಿಗೆ ಹಳಿಯಾಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಧಾರವಾಡದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳಿಯಾಳ ಪೋಲಿಸ್ ಠಾಣೆಯಲ್ಲಿ ಜಾತಿ ನಿಂದನೆ, ಅಪಹರಣ, ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನ : ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಹಳಿಯಾಳ ಪಿಎಎಸ್‌ಐಗಳಾದ ಮಹಾಂತೇಶ ಕುಂಬಾರ ಮತ್ತು ಅಮೀನಸಾಬ ಅತ್ತಾರ ಅವರನ್ನು ಒಳಗೊಂಡ ತಂಡವು ಪರಾರಿಯಾಗಿದ್ದ ಆರೋಪಿಗಳಾದ ಜಾವಳ್ಳಿ ಗ್ರಾಮದ ಗೋಕುಲ ಮಿರಾಶಿ ಹಾಗೂ ತೇರಗಾಂವ ಗ್ರಾಮದ ತುಕಾರಾಮ ಇವರನ್ನು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃತ್ಯಕ್ಕೆ ಬಳಸಲಾದ ವ್ಯಾಗನ್ ಕಾರ್ ( ಎಮ್ ಎಚ್ 12, ಸಿವೈ 7897) ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ಕಾರವಾರದಲ್ಲಿರುವ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ. ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರು ಶುಕ್ರವಾರ ಹಳಿಯಾಳಕ್ಕೆ ಆಗಮಿಸಿ ಪ್ರಕರಣದ ಮಾಹಿತಿ ಸಂಗ್ರಹಿಸಿ, ಪರಿಶೀಲನೆ ನಡೆಸಿದರು.