

ನಂಜನಗೂಡು: ಸಮೀಪದ ಹಂಡುವಿನಹಳ್ಳಿ ಲೇಔಟ್ ಬಳಿ ಶನಿವಾರ ತಡರಾತ್ರಿ ನಗರದ ರಾಜೇಂದ್ರ ಮತ್ತು ಸವಿತಾ ದಂಪತಿ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅನಾಮಿಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಹಣ ಮತ್ತು ಚಿನ್ನದ ಒಡವೆ ದೋಚಲು ಯತ್ನಿಸಿದ್ದಾರೆ.
ಹಂಡುವಿನಹಳ್ಳಿ ಮೂಡಾ ಲೇಔಟ್ ಬಳಿ ರಾಜೇಂದ್ರ ಮತ್ತು ಸವಿತಾ ದಂಪತಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಿಳಿ ಬಣ್ಣದ ಕಾರಿನಿಂದ ಇಳಿದ ಅನಾವಿಕರ ಗುಂಪು ಹಲ್ಲೆ ಮಾಡಿದೆ. ರಾಜೇಂದ್ರ ಅವರಿಗೆ ಕಬ್ಬಿಣದ ವಸ್ತುವಿನಿಂದ ಚುಚ್ಚಿದ್ದಾರೆ. ಬಳಿಕ ಪತ್ನಿ ಸವಿತಾ ಅವರ ಒಡವೆ ಮತ್ತು ಹಣವನ್ನು ದೋಚಲು ಯತ್ನಿಸಿದ್ದಾರೆ. ಅದೇ ಸಮಯಕ್ಕೆ ಎದುರಿನಿಂದ ಬಂದ ಬೈಕ್ ಸವಾರರೊಬ್ಬರನ್ನು ಕಂಡ ಕೂಡಲೇ ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ದಂಪತಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪತ್ನಿ ಸವಿತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.