ಶಾಸ್ತ್ರ ಹೇಳುವ ನೆಪದಲ್ಲಿ ಚಿನ್ನಾಭರಣ ದೋಚಿ ಪರಾರಿ

crime
Published on

ಮಳವಳ್ಳಿ: ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಸೋಮವಾರ ಮಾರು ವೇಷಧಾರಿಯೊಬ್ಬ ಕಣಿ ಶಾಸ್ತ್ರ ಹೇಳುವ ನೆಪದಲ್ಲಿ ವೃದ್ಧೆಯೊಬ್ಬರ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಗ್ರಾಮದ ಗುಜ್ಜಮ್ಮ ಎಂಬ ವೃದ್ಧೆ ವಂಚನೆಗೆ ಒಳಗಾದವರು. ಬುಡಬುಡಿಕೆ ವೇಷಧಾರಿರೊಬ್ಬ ಕಣಿಶಾಸ್ತ್ರ ಹೇಳುವುದಾಗಿ ಬಡಾವಣೆಯಲ್ಲಿ ಸಂಚರಿಸುತ್ತಿದ್ದ, ಈ ವೇಳೆ ವೃದ್ದೆಯ ಮನೆ ಬಳಿ ಬಂದು ನಿಮ್ಮ ಮಗನಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಕಣಿ ಶಾಸ್ತ್ರ ಹೇಳಿ ಆತಂಕ ಹುಟ್ಟಿಸಿದ್ದಾನೆ. ಇದರಿಂದ ಗಾಬರಿಗೊಂಡು ಸಮಸ್ಯೆಗೆ ಪರಿಹಾರವನ್ನು ವೃದ್ಧೆ ಕೇಳಿಕೊಂಡಿದ್ದಾರೆ. ಇದೇ ಅವಕಾಶ ಬಳಸಿಕೊಂಡು ಬುಡುಬುಡಿಕೆ ವೇಷಧಾರಿ ಕುಡಿಕೆ ಮಾಡಿಕೊಡುವುದಾಗಿಯೂ, ಕುಡಿಕೆಯೊಳಗೆ ತಮ್ಮಲ್ಲಿರುವ ಚಿನ್ನಾಭರಣ ಹಾಕುವಂತೆ ಹೇಳಿದ್ದಾನೆ. ಇದನ್ನು ನಂಬಿದ ಗುಜ್ಜಮ್ಮ ತಮ್ಮಲ್ಲಿದ್ದ 12 ಗ್ರಾಂ. ಚಿನ್ನದ ಕಾಸು ಹಾಗೂ ಗುಂಡುಗಳನ್ನು ಕೊಟ್ಟಿದ್ದಾರೆ. ನಂತರ ಪೂಜೆ ಮಾಡುವ ನೆಪದಲ್ಲಿ ಚಿನ್ನದ ಆಭರಣಗಳನ್ನು ತನ್ನ ಜೋಳಿಗೆಯೊಳಗೆ ಹಾಕಿಕೊಂಡು ಕುಡಿಕೆಗೆ ಬಟ್ಟೆ ಸುತ್ತಿ ಸಂಜೆ ನಂತರ ಕುಡಿಕೆಯಿಂದ ಚಿನ್ನಾಭರಣ ತೆಗೆದುಕೊಳ್ಳುವಂತೆ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ವೃದ್ಧೆ ಗುಜ್ಜಮ್ಮ ಸೋಮವಾರ ರಾತ್ರಿ ಕುಡಿಕೆ ಮೇಲಿನ ಬಟ್ಟೆ ಬಿಚ್ಚಿ ಪರಿಶೀಲಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವೃದ್ಧೆಯ ಪುತ್ರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net