ಕಳ್ಳತನ ನೋಡಿದ ವೃದ್ಧನ ಕೊಲೆ

17 mlv 1
ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಕಳುವು ಮಾಡಲು ಬಂದಿದ್ದ ದುಷ್ಕರ್ಮಿಗಳು ಹೋಟೆಲ್ ಮಾಲೀಕನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು.
Published on

ಮಳವಳ್ಳಿ: ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಕಳವು ಮಾಡಿದ್ದನ್ನು ನೋಡಿದ್ದಾನೆ ಎಂದು ಭ್ರಮಿಸಿದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಗ್ರಾಮದ ಮಹಾದೇವಪ್ಪ(75) ಮೃತ. ಇವರು ಗ್ರಾಮದ ಪ್ರಮುಖ ವೃತ್ತದಲ್ಲಿ ಹೋಟೆಲ್ ವೃತ್ತಿ ಮಾಡಿಕೊಂಡಿದ್ದರು. ಇವರ ಹೋಟೆಲ್ ಪಕ್ಕದ ವಾಣಿಜ್ಯ ಮಳಿಗೆಯೊಂದರಲ್ಲಿದ್ದ ಚಿನ್ನದ ಅಂಗಡಿಯ ರೋಲಿಂಗ್ ಶೆಟರ್ ಅನ್ನು ಎಲೆಕ್ಟ್ರಿಕ್ ಕಟರ್ ಬಳಸಿ ಒಳ ನುಸುಳಿದ್ದ ಕಳ್ಳರು ಒಡವೆ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೊರಬಂದಿದ್ದಾರೆ. ಈ ವೇಳೆ ಶಬ್ದ ಕೇಳಿ ಆಗಷ್ಟೇ ಹೋಟೆಲ್ ಬಾಗಿಲು ತೆರೆದಿದ್ದ ಮಹಾದೇವಪ್ಪ, ಪಕ್ಕದ ಅಂಗಡಿಯಲ್ಲಿನ ಶಬ್ದ ಕೇಳಿ ಹೊರ ಬಂದಾಗ ದುಷ್ಕರ್ಮಿಗಳನ್ನು ಪ್ರಶ್ನಿಸಿದ್ದಾರೆ.

ಇದರಿಂದ ಗಾಬರಿಗೊಂಡಿರುವ ಕಳ್ಳರು ಹೋಟೆಲ್ ಮಾಲೀಕನನ್ನು ಹಿಡಿದು ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಒಡವೆ ಅಂಗಡಿಯಲ್ಲಿದ್ದ 150 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಜತೆಗೆ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಹಾರ್ಡ್ ಡಿಸ್ಕ್ ಅನ್ನು ಕಿತ್ತೊಯ್ದಿದ್ದಾರೆ ಎಂದು ಅಂಗಡಿ ಮಾಲೀಕ ಶೇಷರಾವ್ ತಿಳಿಸಿದ್ದಾರೆ.

ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಗಂಗಾಧಸ್ವಾಮಿ, ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್, ಪಿಎಸ್‌ಐ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net