

ಮಡಿಕೇರಿ:
ಆಸ್ತಿಗಾಗಿ ತನ್ನ ತಂದೆಯನ್ನೇ ಸ್ನೇಹಿತರ ಜತೆ ಸೇರಿ ಕೊಲೆ ಮಾಡಿ ಪ್ರಕರಣ ಮರೆಮಾಚಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಚಂದ್ರಶೇಖರ್ (28) ಬಂಧಿತ ಆರೋಪಿ. ಉಳಿದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದ ಕಾವೇರಿ ಹೊಳೆ ದಡದಲ್ಲಿ ಮಾರ್ಚ್ 16ರಂದು ಮೃತದೇಹವೊಂದು ಪತ್ತೆಯಾಗಿತ್ತು. ತನಿಖೆ ಸಂದರ್ಭ ಇದು ಕೂಡುಮಂಗಳೂರು ಗ್ರಾಮದ ನಿವಾಸಿ ಮಂಜಣ್ಣ ಎಂಬವರ ಮೃತದೇಹ ಎನ್ನುವುದು ಗೊತ್ತಾಗಿತ್ತು. ಮಂಜಣ್ಣ ಕೌಟುಂಬಿಕ ಸಮಸ್ಯೆ ಕಾರಣದಿಂದ ಪತ್ನಿ ಮತ್ತು ಮಕ್ಕಳಿಂದ ಬೇರೆಯಾಗಿ ಒಬ್ಬರೇ ಕೂಡುಮಂಗಳೂರು ಗ್ರಾಮದಲ್ಲಿನ ಮನೆಯಲ್ಲಿ ವಾಸವಿದ್ದರು.
ಸುಮಾರು 14 ವರ್ಷಗಳ ಹಿಂದೆ ಕಾಫಿ ಕ್ಯೂರಿಂಗ್ ಕೆಲಸ ಮಾಡುವ ಸಂದರ್ಭ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಎಡ ಕಾಲು ತುಂಡಾಗಿತ್ತು. ನಡೆಯಲು ಕಷ್ಟಸಾಧ್ಯವಾಗಿದ್ದರೂ ಚಿಕ್ಕಬೆಟ್ಟಗೇರಿಗೆ ತೆರಳಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಮೃತ ಮಂಜಣ್ಣ ಪತ್ನಿ ಅನುಮಾನ ವ್ಯಕ್ತಪಡಿಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣ ಆರಂಭಿಸಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಮೃತ ಮಂಜಣ್ಣ ಅವರ ಹಣ ಮತ್ತು ಆಸ್ತಿಯ ಸಲುವಾಗಿ ಆರೋಪಿ ಚಂದ್ರಶೇಖರ್ ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಮಾ.14ರಂದು ಕೂಡುಮಂಗಳೂರು ಗ್ರಾಮದ ಮನೆಯಿಂದ ಮಂಜಣ್ಣ ಅವರನ್ನು ಬಲವಂತದಿAದ ಎತ್ತಿಕೊಂಡು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭ ಮಂಜಣ್ಣ ಕೂಗಿದಾಗ ಚಂದ್ರಶೇಖರ್ ಮತ್ತು ಸ್ನೇಹಿತರು ಹಲ್ಲೆ ನಡೆಸಿದ್ದು, ಪ್ರಜ್ಞೆ ತಪ್ಪಿರುವ ಮಂಜಣ್ಣ ಮೃತಪಟ್ಟಿದ್ದಾರೆ ಎಂದು ಭಾವಿಸಿ ದೇಹವನ್ನು ಚಿಕ್ಕಬೆಟ್ಟಗೇರಿಯಲ್ಲಿ ಕಾವೇರಿ ಹೊಳೆಯಲ್ಲಿ ಎಸೆದು ಸಾಕ್ಷö್ಯ ನಾಶಕ್ಕೆ ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಪಿ. ಚಂದ್ರಶೇಖರ್, ಸಿಪಿಐ ದಿನೇಶ್ ಕುಮಾರ್, ಪಿಎಸ್‌ಐ ಎನ್. ರಾಮಚಂದ್ರ ಮತ್ತಿ ಸಿಬ್ಬಂದಿ ಒಳಗೊಂಡ ವಿಶೇಷ ತನಿಖಾ ತಂಡ ಪ್ರಕರಣವನ್ನು ಬಯಲಿಗೆಳೆದಿದೆ.