3 ಟನ್ ಗೋಮಾಂಸ ಜಪ್ತಿ

tubagere-3-1
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಅಕ್ರಮವಾಗಿ ಸುಮಾರು ಮೂರ‌್ಕಾಲ್ಕು ಟನ್ ತೂಕದ ಗೋಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿದ್ದು ಗೋಮಾಂಸ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಗುಂಜೂರು ಟೋಲ್ ಬಳಿ ಗೋಮಾಂಸ ಸಹಿತ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸ್ಥಳೀಯರ ಕಾರ್ಯಾಚರಣೆ:

ತೂಬಗೆರೆ ಹೋಬಳಿಯ ಗುಂಜೂರು ಟೋಲ್ ಬಳಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿರುವ ಮಾಹಿತಿ ಪಡೆದ ಸ್ಥಳೀಯರು ಟೋಲ್ ವಾಹನ ಬರುತ್ತಿದ್ದಂತೆ ಅಡ್ಡಗಟ್ಟಿದ್ದಾರೆ. ಈ ವೇಳೆ ಸ್ಥಳೀಯರನ್ನು ಕಂಡ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗೋಮಾಂಸ ತುಂಬಿದ್ದ ವಾಹನವನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಮತ್ತೊಬ್ಬ ಸಹಚರ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗೋಮಾಂಸ ಸಹಿತ ವಾಹನವನ್ನು ಜಪ್ತಿ ಮಾಡಿದ್ದಾರೆ, ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ರಾತ್ರಿ ವೇಳೆ ಕಾರ್ಯಾಚರಣೆ: ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರು ಕಡೆಗೆ ಈ ಹಿಂದಿನಿಂದಲೂ ಅಕ್ರಮವಾಗಿ ಗೋಮಾಂಸ ಸಾಗಣೆ ನಡೆಯುತ್ತಿದೆ, ಕಳೆದ ನಾಲ್ಕೈದು ವರ್ಷದಲ್ಲಿ ಸಾಕಷ್ಟು ಬಾರಿ ಇಂಥ ಪ್ರಕರಣಗಳು ಪತ್ತೆಯಾಗಿದ್ದು ಇದರಲ್ಲಿ ಬಹುತೇಕ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಹಿಡಿದುಕೊಟ್ಟಿದ್ದಾರೆ. ಇದರಿಂದ ಎಚ್ಚೆತ್ತಿರುವ ಗೋಮಾಂಸ ಸಾಗಣೆದಾರರು ಕಳ್ಳಮಾರ್ಗದಲ್ಲಿ ರಾತ್ರಿ ವೇಳೆ ಕಾರ್ಯಾಚರಣೆಗಿಳಿಯುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದೆರಡು ವರ್ಷದ ಹಿಂದೆ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ದೊಡ್ಡಬಳ್ಳಾಪುರದ ಕೇಂದ್ರ ಸ್ಥಾನದಲ್ಲೇ ದೊಡ್ಡ ಗದ್ದಲ ಎಬ್ಬಿಸಿದ್ದ ಪ್ರಕರಣ ನಡೆದಿತ್ತು. ವಾಹನಕ್ಕೆ ಬೆಂಕಿ ಹಚ್ಚಿ ಹಲವು ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ನಡೆದಿತ್ತು. ಆ ಬಳಿಕ ಈ ಮಾರ್ಗದಲ್ಲಿ ಗೋಮಾಂಸ ಸಾಗಣೆಗೆ ತಡೆಬಿದ್ದಿತ್ತು. ಇದೀಗ ಮತ್ತೆ ಈ ದಂಧೆ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಎಲ್ಲ ಮೇಲೆ ಬೀಳುತ್ತೆ ಕೇಸ್: ಪ್ರಕರಣ ಸಂಬಂಧ ಪ್ರಸ್ತುತ ಸಿಕ್ಕಿಬಿದ್ದಿರುವ ಆರೋಪಿಯ ತನಿಖೆ ನಡೆಯುತ್ತಿದ್ದು, ವಾಹನ ಚಾಲಕ, ಮಾಂಸ ಮಾರಾಟಗಾರ ಹಾಗೂ ಅದನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಅದನ್ನು ಯಾರೂ ಪಡೆಯಲಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ತೂಬಗೆರೆ ಹೋಬಳಿ ಗುಂಜೂರು ಟೋಲ್ ಬಳಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ, ಶಂಕಿತ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ, ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಆತನ ಬಂಧನಕ್ಕೆ ಹುಡುಕಾಟ ನಡೆದಿದೆ. ಅಕ್ರಮ ಗೋಮಾಂಸ ಸಾಕಣೆ ಪ್ರಕರಣದಡಿ ಕೇಸ್ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ.

ಸಾದಿಕ್‌ಪಾಷಾ, ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ

----

ರಾತ್ರಿ ವೇಳೆ ವಾಹನದಲ್ಲಿ ಗೋಮಾಂಸ ಸಾಗಿಸಿದರೆ ಯಾರು ತಡೆಯುವುದಿಲ್ಲ ಎಂದು ಹಿಂದೂಪುರದಿಂದ ಬೆಂಗಳೂರು ಕಡೆಗೆ ಸಾಗಿಸುತ್ತಾರೆ, ಇತ್ತೀಚಿನ ದಿನಗಳಲ್ಲಿ ಈ ಕೃತ್ಯಕ್ಕೆ ಗುಂಜೂರು ಟೋಲ್ ಮಾರ್ಗ ಬಳಸಲಾಗುತ್ತಿದೆ, ಗೋಮಾಂಸ ಸಾಗಿಸುತ್ತಿರುವ ಮಾಹಿತಿ ತಿಳಿದು ವಾಹನ ಅಡ್ಡಗಟ್ಟಿ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ವಿಜಯ್‌ಕುಮಾರ್, ಸ್ಥಳೀಯರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net