

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಹಂದಿ ಕಳವು ಪ್ರಕರಣ ಮರುಕಳಿಸಿದೆ, ಕಳೆದೊಂದು ವರ್ಷದಿಂದ ಸದ್ದಡಗಿದ್ದ ಹಂದಿ ಕಳವು ಪ್ರಕರಣಕ್ಕೆ ಮರುಜೀವ ಬಂದಂತಿದ್ದು, ವಾರದಲ್ಲೇ ಮೂರ ಕಡೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. 100ಕ್ಕೂ ಹೆಚ್ಚು ಹಂದಿಗಳನ್ನು ಕಳವು ಮಾಡಿರುವ ಕಳ್ಳರು ಹಂದಿ ಸಾಕಣೆದಾರರ ನಿದ್ರೆಗೆಡಿಸಿದ್ದಾರೆ.
ಮಾ.21 ರಂದು ದೇವನಹಳ್ಳಿ ತಾಲೂಕು ಬನ್ನಿಮಂಗಲದಲ್ಲಿ 49 ಹಂದಿಗಳನ್ನು ಕಳವು ಮಾಡಲಾಗಿದೆ, ಮಾ.23ರಂದು ದೊಡ್ಡಬಳ್ಳಾಪುರದ ಬೈರಸಂದ್ರ ಗ್ರಾಮದಲ್ಲಿ 32 ಹಂದಿಗಳನ್ನು ಕದ್ದೊಯ್ದಿದ್ದಾರೆ, ಮಾ.25 ರಂದು ಮತ್ತೆ ಅದೇ ಶೆಡ್‌ನಲ್ಲಿ 17 ಹಂದಿಗಳನ್ನು ಕಳವು ಮಾಡಲಾಗಿದೆ, ಹೀಗೆ ಸರಣಿಯಾಗಿ ಹಂದಿಗಳ ಕಳವು ಪ್ರಕರಣ ನಡೆಯುತ್ತಿರುವುದು ಹಂದಿ ಸಾಕಣೆದಾರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಹಿಂದೆ ನಡೆಯುತ್ತಿದ್ದ ಕುರಿ, ಮೇಕೆ, ಹಸುಗಳ ಕಳುವು ಪ್ರಕರಣಗಳು ನಿಂತಿಹೋಗಿದ್ದರೂ ಹಂದಿಗಳ ಕಳವು ಪ್ರಕರಣಗಳು ಹೆಚ್ಚಳಗೊಂಡಿವೆ. ಪ್ರತಿ ಬಾರಿ ಕಳವು ಪ್ರಕರಣಗಳು ನಡೆದಾಗಲೂ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿವೆ ಆದರೆ ಇದುವರೆಗೆ ಹಂದಿ ಕಳ್ಳರು ಪೊಲೀಸರ ಬಲೆಗೆ ಬಿದ್ದಿಲ್ಲ. ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿರುವ ಹಂದಿ ಸಾಕಣೆದಾರರು ಕಣ್ಣೀರಿಡುತ್ತಿದ್ದಾರೆ. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಸಿಸಿ ಕ್ಯಾಮರಾದಲ್ಲಿ ದಾಖಲು ಈ ಹಿಂದಿನ ಹಲವು ಪ್ರಕರಣಗಳು ಗಮನಿಸಿದರೆ ಒಂದೇ ಮಾದರಿಯಲ್ಲಿ ಕೃತ್ಯಗಳು ನಡೆದಿವೆ, ಸುಮಾರು ಆರೇಳು ಮಂದಿಯ ಕಳ್ಳರ ತಂಡ ಟಾಟಾ ಏಸ್ ವಾಹನವನ್ನೇ ಬಳಸಿದ್ದಾರೆ, ಪ್ರತಿ ಪ್ರಕರಣವೂ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ, ಮುಖಕ್ಕೆ ಮಂಕಿಕ್ಯಾಪ್ ಹಾಗೂ ಬಟ್ಟೆ ಸುತ್ತಿಕೊಂಡಿರುವ ದುಷ್ಕರ್ಮಿಗಳು ಕೈನಲ್ಲಿ ಮಾರಕಾಸಗಳನ್ನು ಹಿಡಿದಿರುವ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆಯಾಗಿವೆ. ಆದರೆ ಇದುವರೆಗೆ ಹಂದಿಕಳ್ಳರ ಜಾಡು ಹಿಡಿಯುವಲ್ಲಿ ಪೊಲೀಸರು ವಿಲವಾಗಿದ್ದಾರೆ.
5 ವರ್ಷದಿಂದಲೂ ಕೃತ್ಯ 2020 ರಿಂದ 2022ರ ಜೂನ್‌ವರೆಗೆ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಹೆಚ್ಚು ಹಂದಿ ಕಳವು ಪ್ರಕರಣ ದಾಖಲಾಗಿತ್ತು. ಮೇಡೆಹಳ್ಳಿಯ ಹಂದಿ ಸಾಕಣೆ ಕೇಂದ್ರದಲ್ಲಿ 2022ರ ಜು.16ರಂದು 73 ಹಂದಿಗಳನ್ನು ಕಳವು ಮಾಡಲಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಗಟ್ಟಿ, ಮೇಡಹಳ್ಳಿ, ಸಾತನೂರು ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿನ ಹಂದಿ ಸಾಕಣಿಕೆ ಕೇಂದ್ರಗಳ ಮೇಲೆ ದಾಳಿ ನಡೆಸಿರುವ ಕಳ್ಳರ ತಂಡ ಸಾಕಣೆದಾರಿಗೆ ಮಾರಕಾಸಗಳನ್ನು ತೋರಿಸಿ ಹೆದರಿಸಿ ಅವರ ಕಣ್ಣಮುಂದೆಯೇ ಹಂದಿಗಳನ್ನು ಹೊತ್ತೊಯ್ದಿದ್ದರು. ಎರಡು ವರ್ಷದ ಅವಧಿಯಲ್ಲಿ 200ಕ್ಕೂ ಹೆಚ್ಚು ಹಂದಿಗಳು ಕಳ್ಳತನವಾಗಿದೆ.
ಠಾಣೆ ಮುಂದೆಯೇ ಸವಾರಿ: ಮೇಡಹಳ್ಳಿಯಲ್ಲಿ 2022ರ ಜು.16ರಂದು 73 ಹಂದಿಗಳನ್ನು ಕದ್ದ ಕಳ್ಳರು ಅಷ್ಟೂ ಹಂದಿಗಳನ್ನು ಎರಡು ಬೊಲೆರೋ ವಾಹಗಳನ್ನು ತುಂಬಿಕೊಂಡು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಎದುರೇ ಸಾಗಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲನೆ ವೇಳೆ ಈ ದೃಶ್ಯ ಕಂಡುಬಂದಿದ್ದು, ಪೊಲೀಸರೇ ಬೇಸ್ತು ಬಿದ್ದಿದ್ದರು. ಈ ಹಿಂದೆ ದೊಡ್ಡಬಳ್ಳಾಪುರ ಉಪವಿಭಾಗ ಪೊಲೀಸ್ ಉಪಾಧ್ಯಕ್ಷಕ ಕಚೇರಿ ಮೆಟ್ಟಿಲೇರಿದ್ದ ಹಂದಿಸಾಕಣೆದಾರರು ಕಳ್ಳರನ್ನು ಪತ್ತೆಹಚ್ಚುವಂತೆ ಮನವಿ ಪತ್ರ ನೀಡಿದರು. ಬೆಂಗಳೂರು ಹಾಗ್ ಫಾರ್ಮರ್ಸ ಪ್ರೊಡ್ಯೂಸರ್ ಕಂಪನಿ ಅಧಿಕಾರಿಗಳು ಸೇರಿ ವಿವಿಧ ಹಂದಿ ಸಾಕಣೆದಾರರು ದೂರು ದಾಖಲಿಸಿ ಕಳ್ಳರ ಸೆರೆಗೆ ಒತ್ತಡ ಹೇರಿದ್ದರು.
ಮಾರಣಾಂತಿಕ ಹಲ್ಲೆ: ಈ ಹಿಂದಿನ ಪ್ರಕರಣದಲ್ಲಿ ಮೇಡಹಳ್ಳಿಯಲ್ಲಿ ಹಂದಿಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಗೆ ಮಾರಕಾಸಗಳನ್ನು ತೋರಿಸಿ ಆತನ ಕೈಕಾಲು ಕಟ್ಟಿ ಆತನ ಮುಂದೆಯೇ 73 ಹಂದಿಗಳನ್ನು ಕದ್ದು ಸಾಗಿಸಿದ್ದರು. ಇನ್ನೂ ಸಾತನೂರು ಹೊಸಹಳ್ಳಿಯಲ್ಲಿ ರಾಮಯ್ಯ ಹಾಗೂ ಸಂದೀಪ್ ಎಂಬ ಅಪ್ಪಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಮರಾ ಮುಂದೆ ಟಾಟಾ: ಹಂದಿಗಳ ಶೆಡ್‌ಗೆ ನುಗ್ಗಿದ ದುಷ್ಕರ್ಮಿಗಳು ಹಂದಿಗಳನ್ನು ಟಾಟಾಏಸ್ ವಾಹನಕ್ಕೆ ತುಂಬಿಕೊಂಡಿದ್ದಾರೆ, ಹೊರಡುವ ಮುನ್ನ ಸಿಸಿ ಕ್ಯಾಮರಾ ಮುಂದೆ ಟಾಟಾ ಹೇಳಿದ್ದಾರೆ, ಇದರಲ್ಲಿ ದುಷ್ಕರ್ಮಿಯೊಬ್ಬ ನೃತ್ಯ ಮಾಡುತ್ತಾ ಮತ್ತೆ ಬರುತ್ತೇವೆ ಎಂಬಂತೆ ಸನ್ನೆ ಮಾಡಿದ್ದಾನೆ, ಈ ದೃಶ್ಯಾವಳಿಗಳು ಕ್ಯಾಮಾರದಲ್ಲಿ ಸೆರೆಯಾಗಿವೆ.
ಹಂದಿ ಸಾಕಣೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನಮಗೆ ಹಂದಿಕಳ್ಳರ ಕಾಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ, ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ಇಂಥ ಕೃತ್ಯಗಳು ನಡೆಯುತ್ತಲೇ ಇವೆ, ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಹಿಡಿಯಬೇಕು, ನಮಗಾಗಿರುವ ನಷ್ಟ ವಾಪಸ್ ಕೊಡಿಸಬೇಕು.
ಲೊಕೇಶ್, ಹಂದಿ ಸಾಕಣೆದಾರ
--------