

ಬೈಲಕುಪ್ಪೆ: ವಿಮೆ ಹಣಕ್ಕಾಗಿ ತಂದೆಯನ್ನೇ ಮಗನೆ ಕೊಲೆ ಮಾಡಿ, ಅರಣ್ಯ ಪ್ರದೇಶದಲ್ಲಿ ಎಸೆದ ಘಟನೆ ಕೊಪ್ಪ ಸಮೀಪದ ಡೋಂಗ್ರಿ ಗೇರಾಸಿಯ ಕಾಲನಿಯಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಠಾಣಾ ವ್ಯಾಪ್ತಿಯ ಡೋಂಗ್ರಿ ಗೇರಾಸಿಯ ಕಾಲನಿ ನಿವಾಸಿ ಅಣ್ಣಪ್ಪ (55) ಕೊಲೆಯಾದವರು. ಇವರ ಮೃತದೇಹ ಗುಳ್ಳೆದಳ್ಳ ಅರಣ್ಯ ಪ್ರದೇಶದಲ್ಲಿ ಬುಧವಾರ ಪತ್ತೆಯಾಗಿದ್ದು, ತನಿಖೆ ನಡೆಸಿದ ಪೊಲೀಸರು ಪಾಂಡು (ಮಗ ) ಎಂಬಾತನನ್ನು ಶುಕ್ರವಾರ ಬಂಧಿಸಿದ್ದಾರೆ.
ಭಾರತೀಯ ಜೀವ ವಿಮಾ ನಿಗಮದ ಪಾಲಿಸಿಯನ್ನು ತಂದೆ ಮಾಡಿಸಿದ್ದರು. ಮರಣ ನಂತರ ನನಗೇ ವಿಮೆ ಹಣ ಬರಬೇಕು (ನಾಮಿನಿ)ಎಂದು ಪಟ್ಟು ಹಿಡಿದ ಸಂದರ್ಭ ಮಾತಿನ ಚಕಮಕಿ ನಡೆಯಿತು. ಆ ಸಂದರ್ಭ ನಾನೇ ಕೊಲೆ ಮಾಡಿದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ವೃತ್ತ ನಿರೀಕ್ಷಕ ದೀಪಕ್, ಪಿಎಸ್‌ಐ ಅಜಯ್ ಕುಮಾರ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.