

ಉಪ್ಪಿನಂಗಡಿ: ಯುವಕನೋರ್ವ ನಸುಕಿನ ಜಾವ 3.30ರ ಸುಮಾರಿಗೆ ಪೆರಿಯಡ್ಕದ ಜನತಾ ಕಾಲೋನಿಯ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದು, ಮನೆ ಮಂದಿ ಎಚ್ಚರಗೊಂಡಾಗ ಆತ ಬೇಲಿ ಹಾರಿ ಅಡಗಿ ಕುಳಿತುಕೊಂಡದ್ದು, ಬೆನ್ನಟ್ಟಿ ಬಂದ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಿರುವುದು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈಗಾಗಲೇ ಹಲವು ಮನೆಗಳಿಗೆ ನುಗ್ಗಿದ್ದ ಪ್ರಕರಣಗಳು ಘಟಿಸಿದ್ದರೂ ಯಾವುದೇ ಮನೆಯಲ್ಲಿ ಕಳ್ಳತನ ನಡೆದಿಲ್ಲ. ಹೀಗಾಗಿ ಪ್ರಕರಣ ನಿಗೂಢವಾಗಿದೆ. ಮಾತ್ರವಲ್ಲದೆ ಒಂದೆರಡು ಮನೆ ಮಂದಿ ಪೊಲೀಸರಿಗೆ ದೂರು ನೀಡಿರುವುದನ್ನು ಬಿಟ್ಟರೆ ಬಹುತೇಕ ಪ್ರಕರಣಗಳು ಸದ್ದಿಲ್ಲದೆ ಶಮನವಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಪತ್ರಿಕೆಗೆ ಮಾಹಿತಿ ನೀಡಿದ ಉಪ್ಪಿನಂಗಡಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವಿನಾಶ್, ಯಾರೂ ಅಧಿಕೃತ ದೂರು ನೀಡಿಲ್ಲ. ಮೌಖಿಕ ದೂರು ನೀಡಿದ ಅನುಸಾರ ಘಟನಾ ಸ್ಥಳಕ್ಕೆ ಹೋಗಿ ಸಿಸಿ ಕ್ಯಾಮರಾ ಪರಿಶೀಲನೆ ಮಾಡಲಾಗಿದೆ. ಈ ಹಿಂದೆ ಅಲ್ಲಿ ಮನೆಗೆ ನುಗ್ಗಿದ ಆರೋಪದಡಿ ಬಂಧಿತನಾಗಿದ್ದ ಆರೋಪಿಯ ಮೇಲೂ ಸಂದೇಹವಿರಿಸಿ ಪರಿಶೀಲನೆ ನಡೆಸಲಾಗಿದೆ. ಆದರೆ ದೃಶ್ಯಾವಳಿಯಲ್ಲಿ ಸೆರೆಯಾದ ವ್ಯಕ್ತಿಗೂ, ಈ ಹಿಂದಿನ ಪ್ರಕರಣದ ಆರೋಪಿಗೂ ಹೊಂದಿಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.