

ಹುಬ್ಬಳ್ಳಿ : ಧಾರವಾಡದ ಬಡ ಕುಟುಂಬದ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣಕ್ಕೆ ಭಾರತೀಯ ಕ್ರಿಕೆಟ್ ತಂಡದ ವಿಕೇಟ್ ಕೀಪರ್ ಕೆ.ಎಲ್. ರಾಹುಲ್ ಆರ್ಥಿಕ ನೆರವು ನೀಡಿದ್ದಾರೆ.
ಅಲೇಮಾರಿ ಜೀವನ ನಡೆಸುತ್ತಿದ್ದ ಹನುಮಂತಪ್ಪ ಹಾಗೂ ಸುಮಿತ್ರಾ ಕುಲಾವಿ ದಂಪತಿಯ ಸೃಷ್ಟಿ ಎಂಬ ಬಾಲಕಿಗೆ ಧಾರವಾಡದ ಖಾಸಗಿ ಶಾಲೆಯ ಪ್ರವೇಶಕ್ಕೆ 21 ಸಾವಿರ ರೂ.ಯನ್ನು ಕೆ.ಎಲ್. ರಾಹುಲ್ ನೀಡಿದ್ದಾರೆ. ಶಾಲೆಯ ಪ್ರವೇಶ ಶುಲ್ಕ 23 ಸಾವಿರ ರೂ. ಇದ್ದು, ಶಾಲೆಯವರು 2 ಸಾವಿರ ರೂ. ವಿನಾಯಿತಿ ನೀಡಿದ್ದಾರೆ.
ಬಡತನದ ಬಗ್ಗೆ ಅರಿವು ಇರದ ಸೃಷ್ಟಿಗೆ ಉತ್ತಮ ಶಾಲೆಯಲ್ಲಿ ಓದಬೇಕು ಎಂಬ ಹಂಬಲ ಇತ್ತು. ಆದರೆ, ಪಾಲಕರಿಗೆ ಆಕೆಯನ್ನು ಉತ್ತಮ ಶಾಲೆಯಲ್ಲಿ ಓದಿಸುವುದು ಕಷ್ಟವಾಗಿತ್ತು.
ಈ ಕುರಿತು ಮಾಹಿತಿ ತಿಳಿದ ಧಾರವಾಡದ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹೆಬಸೂರ ಅವರು ತನ್ನ ಸ್ನೇಹಿತನ ಮೂಲಕ ಕೆ.ಎಲ್. ರಾಹುಲ್ ಅವರನ್ನು ಸಂರ್ಪಸಿದ್ದಾರೆ.
ಬಡ ಬಾಲಕಿಯ ಓದುವ ಆಶಯದ ಬಗ್ಗೆ ಮಂಜುನಾಥ ಅವರು ಕೆ.ಎಲ್. ರಾಹುಲ್ ಅವರಿಗೆ ಮಾಹಿತಿ ನೀಡಿದ್ದಾರೆ.
ಬಿಡುವಿಲ್ಲದ ಕ್ರಿಕೆಟ್ ಅಭ್ಯಾಸ ಹಾಗೂ ಪಂದ್ಯಾವಳಿಗಳ ಮಧ್ಯೆಯೂ ಕೆ.ಎಲ್. ರಾಹುಲ್ ಅವರು ಬಾಲಕಿಯ ಬಗ್ಗೆ ಅರಿತುಕೊಂಡು, ತಕ್ಷಣ ಆಕೆಯ ಪಾಲಕರ ಬ್ಯಾಂಕ್ ಖಾತೆಗೆ 21 ಸಾವಿರ ರೂ. ವರ್ಗಾಯಿಸಿದ್ದಾರೆ. ವಿದ್ಯಾರ್ಥಿನಿಯ ಮುಂದಿನ ಶಿಕ್ಷಣಕ್ಕೂ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.
4 ತಿಂಗಳ ಹಿಂದೆಯಷ್ಟೇ ಮಹಾಲಿಂಗಪುರದ ವಿದ್ಯಾರ್ಥಿಯೊಬ್ಬರಿಗೆ ಸಿಎ ತರಬೇತಿಗಾಗಿ 75 ಸಾವಿರ ರೂ.ಯನ್ನು ಕೆ.ಎಲ್. ರಾಹುಲ್ ನೀಡಿದ್ದರು. ಇದೀಗ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.