

ಹನೂರು: ಯುವಕರು ಕ್ರೀಡೆಯಲ್ಲಿ ಭಾಗವಹಿಸುವುದರ ಜತೆಗೆ ಸಂಘಟಿತರಾಗಿ ಗ್ರಾಮ ಹಾಗೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂ.ವೆಂಕಟೇಶ್ ತಿಳಿಸಿದರು.
ತಾಲೂಕಿನ ಚನ್ನಾಲಿಂಗನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮಾತಂಗ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆ ದೈಹಿಕ ಹಾಗೂ ಮಾನಸಿಕ ವೃದ್ಧಿಗೆ ಸಹಕಾರಿ. ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕ್ರೀಡೆಗಳು ಬಾಂಧವ್ಯ ಹಾಗೂ ಪ್ರೀತಿ, ವಿಶ್ವಾಸವನ್ನು ವೃದ್ಧಿಸುತ್ತವೆ. ಈ ದಿಸೆಯಲ್ಲಿ ಗ್ರಾಮದಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿ ಪೂರಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ಸುಕತೆಯಿಂದ ಭಾಗವಹಿಸಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಗಳಲ್ಲಿ ಯುವಕರು ಒಗ್ಗಟ್ಟನ್ನು ಪ್ರದರ್ಶಿಸುವಂತೆಯೇ ಗ್ರಾಮದ ಅಭಿವೃದ್ಧಿಗೂ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಉನ್ನತ ಹುದ್ದೆಯನ್ನು ಪಡೆಯಬೇಕು. ಮಕ್ಕಳು ಶಿಕ್ಷಣ ಪಡೆಯಲು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ಚನ್ನಾಲಿಂಗನಹಳ್ಳಿ ಸೇರಿದಂತೆ ಶಾಗ್ಯ, ಭೈರನತ್ತ, ಕರಿಯನಪುರ, ಕಾಮಗೆರೆ, ಹನೂರು, ಬೂದುಬಾಳು ಹಾಗೂ ತಿಮ್ಮರಾಜಿಪುರ ಗ್ರಾಮದ ತಂಡಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಬಾಬು ಜಗಜೀವನರಾಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿ, ಗ್ರಾಪಂ ಸದಸ್ಯ ಸೋಮೇಶ್, ಶಿಕ್ಷಕ ನಾಗರಾಜು, ಮುಖಂಡರಾದ ಲಿಂಗರಾಜು, ರಾಜಪ್ಪ, ಕರಿಯಪ್ಪ, ನಾಗೇಂದ್ರ, ಪುನೀತ್, ಪ್ರವೀಣ್, ಮಂಜು, ಪುಟ್ಟಣ್ಣ ಇದ್ದರು.