

ಮಡಿಕೇರಿ: ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಚೇರಂಬಾಣೆಯಲ್ಲಿ ಕೊಡಗು ಗೌಡ ಜನಾಂಗದ ಗ್ರಾಮ ಗ್ರಾಮಗಳ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಬಿಳಿಗಿರಿ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿತು.
ಫೈನಲ್ ಪಂದ್ಯದಲ್ಲಿ ಕರಿಕೆ ತಂಡ ನಿಗದಿತ ಎಂಟು ಓವರ್‌ನಲ್ಲಿ ೪೩ ರನ್ ಗಳಿಸಿತು. ಬಿಳಿಗಿರಿ ತಂಡವು ಐದು ಓವರ್ ನಲ್ಲಿ ನಿಗದಿತ ಗುರಿ ಸಾಧಿಸಿ ಎಂಟು ವಿಕೆಟ್‌ಗಳ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಬಿಳಿಗೇರಿ ಮತ್ತು ಮೇಲ್ ಚೆಂಬು ತಂಡಗಳ ನಡುವೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದು ಮೇಲ್‌ಚೆಂಬು ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಬಿಳಿಗೇರಿ ತಂಡದ ಪರ್ಲಕೋಟಿ ಸಜನ್ ಆರು ಹ್ಯಾಟ್ರಿಕ್ ಸಿಕ್ಸರ್ ಬಾರಿಸುವುದರೊಂದಿಗೆ ೧೨೦ರ ಗುರಿಯನ್ನು ತಂಡಕ್ಕೆ ನೀಡಿದರು. ತಂಡ ನಿಗದಿತ ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ ೫೪ ರನ್ ಮಾಡಿ ಸೋಲನ್ನು ಅನುಭವಿಸಿತು. ಬಿಳಿಗಿರಿ ತಂಡವು ೬೪ ರನ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.
ಕರಿಕೆ ಮತ್ತು ಹೊಸ್ಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೊಸ್ಕೇರಿ ತಂಡ ೧೦೦ ರನ್‌ಗಳ ಸವಾಲನ್ನು ಕರಿಕೆ ತಂಡಕ್ಕೆ ನೀಡಿತು. ಉತ್ತರವಾಗಿ ಆಡಿದ ಕರಿಕೆ ತಂಡದ ಕುದುಪಜೆ ಸಚಿನ್ ಮತ್ತು ಅನ್ವಿತ್ ಜೊತೆಯಾಟದಲ್ಲಿ ಎರಡು ವಿಕೆಟ್ ನಷ್ಟಕ್ಕೆ ೧೦೧ ಗಳಿಸಿ ಫೈನಲ್ ಪ್ರವೇಶಿಸಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಮೇಲ್ ಚೇಂಬು ಮತ್ತು ಹೊಸ್ಕೇರಿ ತಂಡಗಳ ನಡುವೆ ಪಂದ್ಯ ನಡೆಯಿತು. ಮೇಲ್ ಚೆಂಬು ತಂಡವು ೭೬ ರನ್ ಗಳಿಸಿದರೆ ಹೊಸ್ಕೇರಿ ತಂಡ ೬೭ ರನ್ ಮಾಡಿ ೮ ರನ್‌ಗಳ ಸೋಲನ್ನು ಅನುಭವಿಸಿತು.
ಪಂದ್ಯ ಪುರುಷೋತ್ತಮನಾಗಿ ಸಜನ್ ಪರ್ಲಕೋಟಿ, ಉತ್ತಮ ಎಸೆತ ಕ್ರೀಡಾಪಟುವಾಗಿ ವಿಜಯ ಚೆಂಬು, ಕ್ಷೇತ್ರ ರಕ್ಷಕನಾಗಿ ಸಜನ್ ಪರ್ಲಕೋಟಿ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ದರ್ಶನ್ ಪರ್ಲಕೋಟಿ ಹಾಗೂ ಬೆಸ್ಟ್ ಕೀಪರ್ ಕೌಶಿಕ್ ಪರ್ಲಕೋಟಿ ಪ್ರಶಸ್ತಿಯನ್ನು ಪಡೆದುಕೊಂಡರು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಅರಂಬೂರು ರಾಹುಲ್ ೧೨ ಬೋರ್ ಹಾಗೂ ೦.೨೨ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದರು. ೧೨ ಬೋರ್ ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಕುಯ್ಯಮುಡಿ ಸೀತಾರಾಮ್‌ಗಳಿಸಿದರೆ ೦.೨೨ ನಲ್ಲಿ ಪರ್ಚನ ಸತೀಶ್ ದ್ವಿತೀಯ ಸ್ಥಾನಗಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆದಂಬಾಡಿ ರಾಜು ಪಡನೋಳನ ರಮೇಶ್, ಬೆಳ್ಳಿಯನ ರವಿ, ಪರ್ಜನ ಸತೀಶ್, ಮನೋಜ್, ದೊಡ್ಡೇರ ರಕ್ಷಿತ್, ಅರಂಬೂರು ವಸಂತ, ಕುಕ್ಕೆರ ಲಕ್ಷ್ಮಣ ಉಪಸ್ಥಿತರಿದ್ದರು.