

ಮಡಿಕೇರಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎನ್‌ಸಿಎ) 100 ಕೋಟಿ ರೂ.ವೆಚ್ಚದಲ್ಲಿ ಕೊಡಗಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂಗೆ ಸಂಬಂಧಿಸಿದಂತಿರುವ ಜಾಗದ ವಿವಾದ ಇತ್ಯರ್ಥಪಡಿಸಲು ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ. ಇದರಿಂದ ಸ್ಟೇಡಿಯಂ ನಿರ್ಮಾಣ ಘೋಷಣೆ ಮಾಡಿ ಹಲವು ವರ್ಷ ಕಳೆದಿದ್ದರೂ, ಉದ್ದೇಶಿತ ಯೋಜನೆ ಆರಂಭಗೊಂಡಿಲ್ಲ.
ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿರುವ ಪಾಲೆಮಾಡು ಜಾಗ ಒತ್ತುವರಿದಾರರು ಸ್ಮಶಾನ ಜಾಗಕ್ಕಾಗಿ ಒತ್ತಾಯಿಸುತ್ತಿರುವುದು ಸ್ಟೇಡಿಯಂ ನಿರ್ಮಾಣಕ್ಕೆ ತಡೆಯಾಗಿದೆ. ಜಾಗದ ವಿವಾದ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮುತುವರ್ಜಿ ವಹಿಸುತ್ತಿಲ್ಲ ಎಂಬ ಅಸಮಾಧಾನ ಕ್ರೀಡಾ ಪ್ರೇಮಿಗಳಿಂದ ವ್ಯಕ್ತವಾಗುತ್ತಿದೆ.
ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನ ಈ ಯೋಜನೆಗೆ ಕಿಂಚಿತ್ತೂ ಇಲ್ಲ. ಇಲ್ಲಿ ಆಗಬೇಕಾಗಿರುವುದು ಜಾಗದ ವಿವಾದ ಇತ್ಯರ್ಥ ಅಷ್ಟೆ. ಸರ್ಕಾರ ಜಾಗ ಒದಗಿಸಿದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ಒಳಗೊಂಡ ಸ್ಟೇಡಿಯಂ ನಿರ್ಮಿಸಲಿದೆ.
12.20 ಎಕರೆ: 2015ನೇ ಇಸವಿಯಲ್ಲಿ ರಾಜ್ಯ ಸಚಿವ ಸಂಪುಟದ ಒಪ್ಪಿಗೆಯಂತೆ ಜಿಲ್ಲಾಡಳಿತದಿಂದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡಿನ ಸರ್ವೇ ನಂಬರ್ 167/1ಂ ರಲ್ಲಿ 12.20 ಎಕರೆ ಜಾಗವನ್ನು ಅಧಿಕೃತವಾಗಿ ಮಂಜೂರು ಮಾಡಲಾಗಿದೆ. ಆದರೆ, ಇದು ಪಾಲೆಮಾಡಿನಲ್ಲಿ ಬಡ ವರ್ಗದವರ ಸ್ಮಶಾನಕ್ಕೆ ನಿಗದಿಯಾದ ಜಾಗ ಎಂಬ ವಿವಾದ ಏರ್ಪಟ್ಟಿತ್ತು.
ಸ್ಮಶಾನ ವಿವಾದದಿಂದಾಗಿ ಕಾನೂನು-ಸುವ್ಯವಸ್ಥೆಗೂ ತೊಡಕಾಗಿತ್ತು. ಕ್ರಿಕೆಟ್ ಸ್ಟೇಡಿಯಂ, ಸ್ಮಶಾನಕ್ಕೆ ಸಂಬಂಧಿಸಿದಂತೆ ಪರ-ವಿರೋಧದಂತಹ ಪ್ರತಿಭಟನೆ, ಹೋರಾಟ ನಡೆದಿದ್ದವು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರೂ ನ್ಯಾಯಾಲಯದಿಂದ ಕೆಎಸ್‌ಸಿಎ ಪರ ತೀರ್ಮಾನ ಪ್ರಕಟವಾಗಿತ್ತು.
ವಿವಾದದ ಹಿನ್ನೆಲೆಯಲ್ಲಿ ಜಾಗ ಮಂಜೂರಾತಿ ವಿಷಯದಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಿ, ಸರ್ಕಾರ ಆದೇಶ ಜಾರಿಗೊಳಿಸಿತ್ತು. ಕಂದಾಯ ಇಲಾಖೆಯ ಭೂ ಮಂಜೂರಾತಿ ಪೀಠಾಧಿಕಾರಿ ಸಿ.ಮಲಮ್ಮ ಅವರು 9.10.2018 ರಲ್ಲಿ ತಿದ್ದುಪಡಿ ಮಾಡಿದ ಆದೇಶದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮಂಜೂರು ಮಾಡಿದ್ದ 12.70 ಎಕರೆ ಜಾಗದ ಪೈಕಿ 0.50 ಎಕರೆ ಜಮೀನನ್ನು ಹೊದ್ದೂರು ಪಾಲೆಮಾಡ ನಿವಾಸಿಗಳಿಗೆ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಲು ಸರ್ಕಾರದ ಆದೇಶದನ್ವಯ ನಿಗದಿ ಪಡಿಸಲಾಗಿತ್ತು.
ಈ ಬದಲಾವಣೆಯಾಗಿ ಇದೀಗ ಮತ್ತೆ ಒಂದೂವರೆ ವರ್ಷಗಳು ಸಂದಿವೆ. ಹೀಗಿದ್ದರೂ, ಈ ಜಾಗವನ್ನು ಸೂಕ್ತವಾಗಿ ಸರ್ವೇ ನಡೆಸಿ ನಿಗದಿ ಮಾಡಿ ಇದಕ್ಕೆ ಸಂಬಂಧಿಸಿದಂತೆ ಇರುವ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಇನ್ನೂ ಕ್ರಮವಹಿಸಲಾಗಿಲ್ಲ. ಇದರಿಂದ ಮಹತ್ವಾಕಾಂಕ್ಷೆಯ ಕ್ರಿಕೆಟ್ ಸ್ಟೇಡಿಯಂ ಯೋಜನೆ ನನೆಗುದಿಗೆ ಬಿದ್ದಿದೆ.
100 ಕೋಟಿ ರೂ. ಯೋಜನೆ
ಪಾಲೇಮಾಡು ಕ್ರಿಕೆಟ್ ಸ್ಟೇಡಿಯಂ ಯೋಜನೆಗೆ ಬರೋಬರಿ 100 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದೆ. ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಮೈದಾನಕ್ಕಿಂತಲೂ ದೊಡ್ಡದಾಗಲಿದೆ. ಸ್ಟೇಡಿಯಂನಲ್ಲಿ ಈಜುಕೊಳ, ರೆಸ್ಟೋರೆಂಟ್, ಸಾವಿರ ಜನ ಸಾಮರ್ಥ್ಯದ ಕನವೆನ್‌ಶನಲ್ ಹಾಲ್, ಶಟಲ್ ಬ್ಯಾಡ್ಮಿಂಟನ್ ಕೋರ್ಟ್, ಬಿಲಿಯಡ್ಸ್, ಸ್ಕ್ವಾಷ್, ಬಾಸ್ಕೆಟ್‌ಬಾಲ್ ಕೋರ್ಟ್ ಸಹಿತ ಕ್ರಿಕೆಟ್ ಪ್ರ್ಯಾಕ್ಟಿಸ್ ಪಿಚ್ ಇತ್ಯಾದಿಗಳು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಜಾಗ ಮಂಜೂರಾತಿ ಆದೇಶದಲ್ಲಿ ಬದಲಾವಣೆಯಾದ ಬಳಿಕ ವಿವಾದ ಬಗೆಹರಿಯಿತು ಎಂಬಂತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೂ ಮತ್ತೆ ವಿವಾದಗಳ ಅಡೆತಡೆಯಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಸ್ಥಳಾಂತರದ ವದಂತಿ
ಜಿಲ್ಲೆಗೆ ಮಂಜೂರು ಮಾಡಿದ್ದ ಕ್ರಿಕೆಟ್ ಸ್ಟೇಡಿಯಂ ಯೋಜನೆ ಹಿಂಪಡೆಯಲಾಗಿದೆ ಎಂಬ ವದಂತಿ ಕೇಳಿ ಬಂದಿತ್ತು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವುದರಿಂದ ಕೊಡಗು ಜಿಲ್ಲೆಯ ಬದಲು ಬೇರೆ ಜಿಲ್ಲೆಗೆ ಸ್ಟೇಡಿಯಂ ವರ್ಗಾಯಿಸಲಾಗಿದೆ ಎಂಬ ಊಹಾಪೋಹಗಳು ಕೇಳಿ ಬಂದಿವೆ. ಆದರೆ, ಸಂಸ್ಥೆ ನಿಲುವು ಬದಲಾಯಿಸಿಲ್ಲ. ಕೊಡಗಿನಲ್ಲಿಯೇ ನಿರ್ಮಾಣವಾಗಲಿದೆ ಎಂದು ಕೆಎಸ್‌ಸಿಎ ಜಿಲ್ಲಾ ಸಂಯೋಜಕ ಚೇನಂಡ ಪೃಥ್ವಿ ದೇವಯ್ಯ ಸ್ಪಷ್ಟಪಡಿಸಿದ್ದಾರೆ.
ಕೆಎಸ್‌ಸಿಎ ಸಂಸ್ಥೆ ಕೊಡಗು ಸೇರಿದಂತೆ, ಹಾಸನ, ದಾವಣಗೆರೆ, ಕೋಲಾರ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಜಿಲ್ಲೆಯಲ್ಲಿ ಕ್ರಿಕೆಟ್ ಸ್ಟೇಡಿಯಂ ಮಂಜೂರು ಮಾಡಿದೆ. ಇತರೆ ಜಿಲ್ಲೆಯಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಕೊಡಗು ಜಿಲ್ಲೆಯಲ್ಲಿ ಮಾತ್ರ ಇದರ ಅಡೆತಡೆ ಇನ್ನೂ ನಿವಾರಣೆಯಾಗದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮತ್ತು ಸ್ಮಶಾನ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದದಿಂದ ಕಾನೂನು- ಸುವ್ಯವಸ್ಥೆಗೆ ಧಕ್ಕೆ ಆಗಬಾರದು. ಈ ಹಿನ್ನೆಲೆಯಲ್ಲಿ ಎರಡೂ ಕಡೆಯವರನ್ನು ಕರೆಸಿ ಎರಡು ವಾರದಲ್ಲಿ ಸಭೆ ನಡೆಸಲಾಗುವುದು. ತದನಂತರ ಸೂಕ್ತ ನಿರ್ಧಾರಕ್ಕೆ ಬರಲಾಗುವುದು.
ಅನೀಸ್ ಕಣ್ಮಣಿ ಜಾಯ್ ಜಿಲ್ಲಾಧಿಕಾರಿ
ಸರ್ಕಾರ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಆದೇಶ ಹೊರಡಿಸಿದೆ. ಹೀಗಿದ್ದರೂ, ಜಿಲ್ಲಾಡಳಿತ ಇದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಸ್ಟೇಡಿಯಂ ನಿರ್ಮಾಣ ಕಾಮಗಾರಿ ವಿಳಂಬವಾಗುವುದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿದೆ. ಉದ್ದೇಶ ಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ.
ಕೆ.ಜಿ.ಬೋಪಯ್ಯ ವಿರಾಜಪೇಟೆ ಶಾಸಕ
ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಿಂದ ಕೊಡಗಿನ ಆಟಗಾರರಿಗೆ ಉತ್ತಮ ಅವಕಾಶವಾಗಲಿದೆ. ಸರ್ಕಾರ ಈಗಾಗಲೇ ನೀಡಿರುವ ಆದೇಶದಂತೆ ಕಾನೂನು ತೊಡಕಿಲ್ಲ. ಜಿಲ್ಲಾಡಳಿತ ಮುತುವರ್ಜಿ ವಹಿಸಿ, ತ್ವರಿತಗತಿಯಲ್ಲಿ ಸ್ಟೇಡಿಯಂ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮಾಡಬೇಕು.
ಶಾಂತೆಯಂಡ ವೀಣಾ ಅಚ್ಚಯ್ಯ ಎಂಎಲ್ಸಿ