ತುಮಕೂರು ಸಮೀಪ ಕ್ರಿಕೆಟ್​ ಸ್ಟೇಡಿಯಂ!

stadium
Published on

ವಿಶೇಷ ವರದಿ ತುಮಕೂರು

ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯಮಟ್ಟದ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದ್ದು, ಶಿರಾ ಅಥವಾ ತುಮಕೂರು ತಾಲೂಕಿನಲ್ಲಿ ಮೈದಾನ ನಿರ್ಮಿಸಬೇಕು ಎಂದು ಇಬ್ಬರು ಟಾನುಟಿಗಳು ನಡೆಸಿದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಡಾ.ಜಿ.ಪರಮೇಶ್ವರ ಕೈ ಮೇಲಾಗಿದೆ.

ತುಮಕೂರು ತಾಲೂಕು ಬೆಳ್ಳಾವಿ ಹೋಬಳಿ ಪಿ.ಗೊಲ್ಲಹಳ್ಳಿಯಲ್ಲಿ 25 ಎಕರೆ ಹಾಗೂ ಸೋರೆಕುಂಟೆ ಬಳಿ 16.33 ಎಕರೆ ಸೇರಿ ಒಟ್ಟು 41.33 ಎಕರೆ ಜಮೀನು ವಿಶ್ವದರ್ಜೆ ಮಟ್ಟದ ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣ ನಿರ್ಮಿಸಲು ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ಗೆ ನೀಡಲಾಗಿದ್ದು, ಶ್ರೀದಲ್ಲಿಯೇ ಶಂಕುಸ್ಥಾಪನೆ ನೆರವೇರಲಿದೆ.

ದೇಶಿ ಕ್ರಿಕೆಟ್​ ಸೇರಿ ಐಪಿಎಲ್​, ಅಂತಾರಾಷ್ಟ್ರೀಯ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಇಲ್ಲಿನ ಒತ್ತಡ ಕಡಿಮೆ ಮಾಡಲು ಬೆಂಗಳೂರಿಗೆ ಹತ್ತಿರವಾಗಿರುವಂತೆ ಮತ್ತೊಂದು ಅಂತಾರಾಷ್ಟ್ರೀಯಮಟ್ಟದ ಕ್ರಿಕೆಟ್​ ಸ್ಟೇಡಿಯಂ ನಿರ್ಮಿಸಲು ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ ತೀರ್ಮಾನಿಸಿದ್ದು, ತುಮಕೂರು ತಾಲೂಕಿನಲ್ಲಿ ಮೈದಾನ ನಿರ್ಮಾಣವಾಗುವುದು ಖಚಿತವಾಗಿದೆ.

ತುಮಕೂರು ತಾಲೂಕಿನಲ್ಲಿ ಕ್ರಿಕೆಟ್​ ಸ್ಟೇಡಿಯಂ ನಿರ್ಮಿಸಲು ಜಾಗ ಮೀಸಲಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಆಗಸ್ಟ್​ 15ರಂದು ಸ್ವಾತಂತೊ$್ಯತ್ಸವದ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಇದರ ಬೆನ್ನಹಿಂದೆಯೇ ಶಿರಾ ಶಾಸಕ ಟಿ.ಬಿ.ಜಯಚಂದ್ರ ಕೂಡ ಶಿರಾ ತಾಲೂಕಿನಲ್ಲಿಯೇ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪರಮೇಶ್ವರ್​ ಅವರಿಗೆ ಟಾಂಗ್​ ನೀಡಿದ್ದರು.

ಕೆಎಸ್​ಸಿಎ ಅಧ್ಯಕ್ಷ ಎ.ರುರಾಮ್​ ಭಟ್​ ಅವರು ಶಿರಾಗೆ ಭೇಟಿ ನೀಡಿ ಸ್ಥಳ ಕೂಡ ಪರಿಶೀಲಿಸಿ ಭೂಮಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಕೂಡ ಬರೆದಿದ್ದರು. ಭೂಮಿ ಹಸ್ತಾಂತರ ಪ್ರಕ್ರಿಯೆ ಹಾಗೂ ಮೂಲಸೌಕರ್ಯಗಳ ಆಧಾರದ ಮೇಲೆ ತುಮಕೂರು ಸಮೀಪದ ಪಿ.ಗೊಲ್ಲಹಳ್ಳಿ ಜಾಗವನ್ನು ಕೆಎಸ್​ಸಿಎ ಆಯ್ಕೆ ಮಾಡಿಕೊಂಡಿದ್ದು, ಕ್ರಿಕೆಟ್​ ಪ್ರಿಯರ ಸಂತಸಕ್ಕೆ ಕಾರಣವಾಗಿದೆ.

"ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್​ ಮೈದಾನ ನಿರ್ಮಿಸಲು ತುಮಕೂರು ಸಮೀಪ ಜಾಗ ಗುರುತಿಸಲಾಗಿದ್ದು, ಕಾಗದ ಪತ್ರ ಕೂಡ ಸಿದ್ಧವಾಗಿವೆ. ಶಿರಾ ತಾಲೂಕಿನಲ್ಲಿಯೂ ಜಾಗದ ಪರಿಶೀಲನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಅಲ್ಲಿಯೂ ಕ್ರಿಕೆಟ್​ ಚಟುವಟಿಕೆ ಆರಂಭಿಸುವ ಬಗ್ಗೆ ಚಿಂತನೆಯಿದೆ."

- ಎ.ರುರಾಮ್​ ಭಟ್​, ಅಧ್ಯಕ್ಷ, ಕೆಎಸ್​ಸಿಎ

"ಬೆಂಗಳೂರಿಗೆ ಸಮೀಪದಲ್ಲಿಯೇ ಇರುವ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್​ ಕ್ರೀಡಾಂಗಣ ನಿರ್ಮಿಸಲು 41 ಎಕರೆ ಭೂಮಿಯನ್ನು ಕೆಎಸ್​ಸಿಎಗೆ ನೀಡಲಾಗಿದೆ. ಡಿ.2ರಂದು ನೂತನ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆಯೂ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮಾದರಿಯಲ್ಲಿ ಅತ್ಯಾಧುನಿಕ ಕ್ರಿಕೆಟ್​ ಸ್ಟೇಡಿಯಂ ನಮ್ಮ ಜಿಲ್ಲೆಯಲ್ಲಿಯೂ ತಲೆ ಎತ್ತಲಿದೆ."

- ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ

"ಶಿರಾ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನ ನಿರ್ಮಿಸಬೇಕು ಎಂಬ ನಮ್ಮ ಪ್ರಯತ್ನ ಮುಂದುವರಿಯಲಿದೆ. ಸರ್ಕಾರದ 22 ಎಕರೆ ಭೂಮಿ ನೀಡಲು ನಾವು ಸಿದ್ಧರಿದ್ದೇವೆ. ಈಗಾಗಲೇ ಕೆಎಸ್​ಸಿಎ ಪದಾಧಿಕಾರಿಗಳು ಭೂಮಿ ನೋಡಿ ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರದ ಜತೆಗೂ ಪತ್ರವ್ಯವಹಾರ ನಡೆಸಲಾಗಿದ್ದು, ಶಿರಾ ನಗರದಲ್ಲಿಯೇ ಮೈದಾನ ನಿರ್ಮಾಣವಾಗುವ ವಿಶ್ವಾಸವಿದೆ."

- ಟಿ.ಬಿ.ಜಯಚಂದ್ರ, ದೆಹಲಿ ವಿಶೇಷ ಪ್ರತಿನಿಧಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net