ಕ್ರಿಕೆಟ್: ಪರ್ಲಕೋಟಿ ತಂಡ ಚಾಂಪಿಯನ್

gowda cricket
Published on

ಮಡಿಕೇರಿ: ಮರಗೋಡುವಿನ ಗೌಡ ಇವ್ನಿಂಗ್ ಸ್ಟಾರ್ಸ್‌ ಸಮಿತಿ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಅರೆಭಾಷೆ ಜನಾಂಗ ಬಾಂಧವರಿಗಾಗಿ ನಡೆದ ಗೌಡ ಕ್ರಿಕೆಟ್ ಹಬ್ಬದಲ್ಲಿ ಪರ್ಲಕೋಟಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮರಗೋಡುವಿನ ಭಾರತೀಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಉಳುವಾರನ ತಂಡ ನಿಗದಿತ ೧೦ ಓವರ್‌ನಲ್ಲಿ ೭ ವಿಕೆಟ್ ಕಳೆದುಕೊಂಡು ೬೮ರನ್ ಕಲೆ ಹಾಕಿತು. ತಂಡದ ಪರ ಪ್ರಪುಲ್ ೨೬, ಪುನೀತ್ ೧೦, ವಿನ್ಯಾಸ್ ೧೧, ಪ್ರವೀಣ್ ೧೦ ರನ್ ಕಲೆ ಹಾಕಿದರು. ಪರ್ಲಕೋಟಿ ಪರವಾಗಿ ರಕ್ಷಿತ್ ೨, ದರ್ಶನ್, ಸಜನ್, ದಿಜಿತ್ ತಲಾ ಒದೊಂದು ವಿಕೆಟ್ ಕಬಳಿಸಿದರು.

ಗುರಿಬೆನ್ನಟ್ಟಿದ ಪರ್ಲಕೋಟಿ ತಂಡ ೬.೨ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವಿನ ದಡ ಸೇರಿತು. ತಂಡದ ಪರ ದರ್ಶನ್ ೨೪ ಎಸೆತದಲ್ಲಿ ೬ ಸಿಕ್ಸರ್ ಮತ್ತು ೧ ಬೌಂಡರಿ ನೆರವಿನೊಂದಿಗೆ ಅರ್ಧಶತಕ ಪೂರೈಸಿದರೆ, ಸತ್ಯ ೧೩ ರನ್ ಕಲೆಹಾಕಿ ತಂಡದ ಗೆಲುವಿಗೆ ಕಾರಣರಾದರು.

ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯವನ್ನು ಮಾರ್ಚೆಂಟ್ ನೇವಿ ಎಲೆಕ್ಟ್ರೋ ಟಿಕ್ನಿಕಲ್ ಆಫಿಸರ್ ಕೊಂಪುಳಿರ ದಿನೇಶ್ ಉದ್ಘಾಟಿಸಿದರು. ಈ ಸಂದರ್ಭ ಕಾಫಿ ಬೆಳೆಗಾರರಾದ ದಂಬೆಕೋಡಿ ದರ್ಶನ್, ಬಿದ್ರುಪಣೆ ಅಯ್ಯಪ್ಪ ಉಪಸ್ಥಿತರಿದ್ದರು. ನಂತರ ನಡೆದ ಟಾಸ್ ಪ್ರಕ್ರಿಯೆಯಲ್ಲಿ ಟಾಸ್ ಸೋತ ಪರ್ಲಕೋಟಿ ತಂಡ ನಿಗದಿತ ೧೦ ಓವರ್‌ನಲ್ಲಿ ೩ ವಿಕೆಟ್ ಕಳೆದುಕೊಂಡು ೯೫ರನ್ ಕಲೆ ಹಾಕಿತು. ತಂಡದ ಪರ ದರ್ಶನ್ ೨೬ ಎಸೆತದಲ್ಲಿ ೩೫, ರಕ್ಷಿತ್ ೨೦, ಸತ್ಯ ೧೫ ರನ್ ಹಾಕಿದರು. ಕಟ್ಟೆಮನೆ ತಂಡದ ಪರವಾಗಿ ಮಿಥುನ್, ರಾಜೇಶ್, ಪ್ರೀತಂ ತಲಾ ಒದೊಂದು ವಿಕೆಟ್ ಕಬಳಿಸಿದರು.

ಗುರಿಬೆನ್ನಟ್ಟಿದ ಕಟ್ಟೆಮನೆ ತಂಡ ನಿಗದಿತ ಓವರ್‌ನಲ್ಲಿ ೯ ವಿಕೆಟ್ ಕಳೆದುಕೊಂಡು ೬೪ರನ್ ದಾಖಲಿಸಿ ೩೧ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ತಂಡದ ಪರ ನಾಯಕ ರೋಶನ್ ೧೧ ಎಸೆತದಲ್ಲಿ ೩ ಸಿಕ್ಸರ್ ಮತ್ತು ೧ ಬೌಂಡರಿ ನೆರವಿನೊಂದಿಗೆ ೨೩ ದಾಖಲಿಸಿದ್ದು ಹೊರತುಪಡಿಸಿದರೆ ಮಿಥುನ್ ೧೫ರನ್ ಕಲೆ ಹಾಕಿದರು. ಪರ್ಲಕೋಟಿ ತಂಡದ ಪರವಾಗಿ ಜಸ್ವಿತ್ ಬೋಪಣ್ಣ, ಸಜನ್ ತಲಾ ೨ ವಿಕೆಟ್ ಕಬಳಿಸಿದರೆ, ವಿಜಿತ್, ಸತ್ಯ ತಲಾ ಒಂದೊಂದು ವಿಕೆಟ್ ಪಡೆದರು.

ಎರಡನೇ ಸೆಮಿಫೈನಲ್ ಪಂದ್ಯವನ್ನು ಟಾಟಾ ಪವರ್‌ನ ನಿವೃತ್ತ ಉದ್ಯೋಗಿ ತಳೂರು ಪೂಣಚ್ಚ ಉದ್ಘಾಟಿಸಿದರು. ಕಾಫಿ ಬೆಳೆಗಾರರಾದ ಬಿದ್ರುಪಣೆ ವಿಕಾಸ್, ಆಶಿರ್ವಾದ್ ಫರ್ನಿಚರ್ ಮಾಲೀಕ ಕರ್ಕರನ ಹೇಮಂತ್ ಉಪಸ್ಥಿತರಿದ್ದರು. ನಂತರ ನಡೆದ ಟಾಸ್ ಪ್ರಕ್ರಿಯೆಯಲ್ಲಿ ಟಾಸ್ ಸೋತ ಉಳುವಾರನ ತಂಡ ನಿಗದಿತ ಓವರ್‌ನಲ್ಲಿ ೯ ವಿಕೆಟ್ ಕಳೆದುಕೊಂಡು ೮೯ ರನ್ ಕಲೆ ಹಾಕಿತು. ತಂಡದ ಪರ ಪ್ರವೀಣ್ ೧೧ ಎಸೆತದಲ್ಲಿ ೫ ಸಿಕ್ಸರ್ ನೆರವಿನೊಂದಿಗೆ ೩೧ ರನ್ ದಾಖಲಿಸಿದರು. ತಳೂರು ತಂಡದ ಪರ ಪವನ್ ೫ ವಿಕೆಟ್ ಪಡೆದು ಮಿಂಚಿದರು. ಗುರಿಬೆನ್ನಟ್ಟಿದ ತಳೂರು ತಂಡ ೬ ವಿಕೆಟ್ ಕಳೆದುಕೊಂಡು ೭೪ ರನ್ ದಾಖಲಿಸಿ ೧೫ ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ತಂಡದ ಪರ ಶ್ರೇಯಸ್ ೨೯, ಪವನ್ ೧೫, ರನ್ ದಾಖಲಿಸಿದರು. ಉಳುವಾರನ ಪರ ಜೀವಿ ೩, ಪ್ರವೀಣ್ ೨ ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.

ವೈಯುಕ್ತಿಕ ಪ್ರಶಸ್ತಿ ವಿವರ

ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪರ್ಲಕೋಟಿ ತಂಡದ ದರ್ಶನ್ ಪಡೆದರು. ಅತ್ಯಮೂಲ್ಯ ಆಟಗಾರ ತಳೂರು ವಿಕ್ಕಿ, ಉತ್ತಮ ಎಸೆತಗಾರ ಉಳುವಾರನ ತಂಡದ ಜೀವು, ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಪರ್ಲಕೋಟಿ ತಂಡದ ಲಕ್ಷಿತ್, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಸಣ್ಣಜನ ತಂಡದ ಗೋಕುಲ್, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಬಿಳಿಯಂಡ್ರ ತಂಡದ ಸತ್ಯಾನಂದ್, ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಪುನರ್ವ ಲಕ್ಷ್ಮಿಪತಿ ಪಡೆದುಕೊಂಡರು.

ಪರ್ಲಕೋಟಿಗೆ ೫೦,೦೦೦ ನಗದು

ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಪರ್ಲಕೋಟಿ ತಂಡಕ್ಕೆ ೫೦,೦೦೦ ನಗದು ಮತ್ತು ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು. ರನ್ನರ್ ಅಪ್ ಪ್ರಶಸ್ತಿ ಪಡೆದ ಉಳುವಾರನ ತಂಡಕ್ಕೆ ೩೦,೦೦೦ ನಗದು ಮತ್ತು ಆಕರ್ಷಕ ಟ್ರೋಪಿ ನೀಡಿ ಗೌರವಿಸಲಾಯಿತು. ಸೆಮಿಫೈನಲ್ಸ್‌ನಲ್ಲಿ ಸೋತ ಕಟ್ಟೆಮನೆ ಮತ್ತು ತಳೂರು ತಂಡಕ್ಕೆ ತಲಾ ೧೦,೦೦೦ ಹಾಗೂ ಕ್ವಾರ್ಟರ್ ಫೈನಲ್ಸ್‌ನಲ್ಲಿ ಸೋತ ಕುದುಪಜೆ, ಕೆದಂಬಾಡಿ, ಬಿಳಿಯಂಡ್ರ, ಕಡ್ಲೇರ ತಂಡಗಳಿಗೆ ತಲಾ ೫,೦೦೦ ನೀಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭ

ಗೌಡ ಕ್ರಿಕೆಟ್ ಹಬ್ಬದ ಸಮಾರೋಪ ಸಮಾರಂಭ ಗೌಡ ಇವ್ನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಷನ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್‌ಗೌಡ, ಮಾಜಿ ವಿಧಾನಸಭೆ ಸಭಾಪತಿ ಮತ್ತು ಮಾಜಿ ಶಾಸಕ ಕೊಂಬಾರನ ಬೋಪಯ್ಯ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರಂದ್ಲಾಜೆ ಆನಂದ್, ಗೌಡ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ತುಂತಜೆ ಗಣೇಶ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್‌ ಮಾದಪ್ಪ, ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಪ್ರಮುಖರಾದ ಎಡಕೇರಿ ಪ್ರಸನ್ನ, ಬಡುವಂಡ್ರ ಕವಿತಾ ಬೆಳ್ಯಪ್ಪ, ಕಟ್ಟೆಮನೆ ಪ್ರೇಮಾ ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net