

ಮಡಿಕೇರಿ: ಗಾಳಿಬೀಡು ಪ್ರೌಢ ಶಾಲೆಯ ಆಟದ ಮೈದಾನದಲ್ಲಿ ಗಾಳಿಬೀಡು ಯುವಕರ ಸಂಘದಿಂದ ಇತ್ತೀಚೆಗೆ ಅಯೋಜಿಸಲಾಗಿದ್ದ ಗಾಳಿಬೀಡು ಚಾಂಪಿಯನ್ ಕ್ರಿಕೆಟ್ ಲೀಗ್‌ನಲ್ಲಿ ಕೆ.ಪಿ.ರಾಕರ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಆರು ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಹೆಬ್ಬೆಟ್ಟಗೇರಿಯ ಕೆ.ಪಿ.ರಾಕರ್ಸ್ ತಂಡ ಜಯಭೇರಿ ಬಾರಿಸಿತು. ಗಾಳಿಬೀಡಿನ ಕೆ.ಕೆ.ಫ್ರೆಂಡ್ಸ್ ಕೆ.ಪಿ.ರಾಕರ್ಸ್ ಎದುರು ಪರಾಭವಗೊಂಡು ರನ್ನರ್ಸ್ ಸ್ಥಾನ ಪಡೆದುಕೊಂಡರೆ, ಎಚ್.ಡಿ ಈಗಲ್ಸ್ ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು.
ವೈಯಕ್ತಿಕ ಬಹುಮಾನಗಳು: ಬೆಸ್ಟ್ ಬ್ಯಾಟ್ಸ್ ಮನ್ ರಂಜು ಕೊಂಬಾರನ, ಬೆಸ್ಟ್ ಬೌಲರ್ ಪಿ.ಸಿ.ರಮೇಶ, ಮ್ಯಾನ್ ಆಫ್ ದಿ ಸೀರಿಸ್ ರಂಜು ಕೊಂಬಾರನ, ಎನರ್ಜೆಟಿಕ್ ಪ್ಲೇಯರ್ ಪ್ರಶಸ್ತಿಯನ್ನು ಧನಿಕ್, ಬೆಸ್ಟ್ ಪರ್ಫಾರ್ಮರ್ ಪ್ರಶಸ್ತಿಯನ್ನು ಗಣೇಶ್ ಪೂಜಾರಿ ಪಡೆದುಕೊಂಡರು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಳುಮುಡಿಯನ ಅನಂತ್ ಕುಮಾರ್ ಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿ, ಗಾಳಿಬೀಡು ಗ್ರಾಮದಲ್ಲಿ ಯುವಕರು ಹೀಗೊಂದು ಕ್ರೀಡಾಕೂಟ ಅಯೋಜಿಸಿದ್ದು ಸಂತಸದ ವಿಚಾರ ಎಂದರು.
ನಿವೃತ್ತ ಡಿ.ವೈ.ಎಸ್.ಪಿ ಯಾಲದಾಳು ಕೇಶವಾನಂದ ನೆರೆದವರನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಉದ್ಯಮಿ ಪುಷ್ಪ ಪೂಣಚ್ಚ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನಿಗೆ ನಗದು ಬಹುಮಾನ ನೀಡಿ, ಯುವಕರ ಪ್ರಯತ್ನಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ ಎನ್ನುವ ಭರವಸೆ ನೀಡಿದರು.
ಆಕರ್ಷಕ ಬಹುಮಾನವಾಗಿ ಕಾಶಿ ಸಹೋದರರು ನೀಡಿದ ಸೈಕಲ್ ನೆರೆದವರ ಗಮನಸೆಳೆಯಿತು. ವೇದಿಕೆಯಲ್ಲಿ ತೆಕ್ಕಡ ಕಾಶಿ ಕಾವೇರಪ್ಪ, ಕ್ರೀಡೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ ಜನಾರ್ಧನ, ಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ರವಿ, ಪತ್ರಕರ್ತ ಚಂದನ್ ನಂದರಬೆಟ್ಟು, ಪಂಚಾಯಿತಿ ಸದಸ್ಯ ಗಿರಿ ಮತ್ತಿತರರು ಹಾಜರಿದ್ದರು.