

ಮಡಿಕೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಾಸನ ನಗರದ ಕಲಾ, ವಿಜ್ಞಾನ ಕಾಲೇಜು ಹಾಗೂ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ನಡೆದ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಆಕರ್ಷಕ ಟ್ರೋಫಿಯೊಂದಿಗೆ ಕೊಡಗು ತಂಡವು ೨೫ ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದೆ. ಎರಡನೇ ರನ್ನರ್ ಅಪ್ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ರಾಯಚೂರು ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬಾಲ್ ಮಾಡಿದ ಕೊಡಗು ತಂಡವು ಇಸ್ಮಾಯಿಲ್ ಕಂಡಕರೆ ಹಾಗೂ ತಂಡದ ನಾಯಕ ಮಂಜು ಅವರ ಅಮೋಘ ಬೌಲಿಂಗ್ ದಾಳಿಯಿಂದ ನಿಗದಿತ ಎರಡು ಓವರ್‌ಗಳಲ್ಲಿ ರಾಯಚೂರು ತಂಡವನ್ನು ೧೫ ರನ್‌ಗಳಿಗೆ ಕಟ್ಟಿ ಹಾಕಿತು. ೧೬ ರನ್‌ಗಳ ಗುರಿಯನ್ನು ಬೆನ್ನಟ್ಟಿ ಬ್ಯಾಟ್ ಮಾಡಿದ ಕೊಡಗು ತಂಡವು ತಂಡದ ಉಪನಾಯಕ ಎ.ಎಸ್.ಮುಸ್ತಫಾ ಅವರು ಕೇವಲ ನಾಲ್ಕು ಬಾಲ್‌ಗಳಲ್ಲಿ ಗುರಿ ತಲುಪಿಸಿದರು.
ಇದಕ್ಕೂ ಮೊದಲು ನಡೆದ ಲೀಗ್ ಪಂದ್ಯದಲ್ಲಿ ಕೊಡಗು ತಂಡವು ಚಿಕ್ಕಮಗಳೂರು ತಂಡವನ್ನು ಮಣಿಸಿತು. ಚಿಕ್ಕಮಗಳೂರು ತಂಡದ ವಿರುದ್ಧ ಮೊದಲು ಟಾಸ್ ಗೆದ್ದು ಬಾಲ್ ಮಾಡಿದ ಕೊಡಗು ತಂಡವು ಎ.ಎಸ್.ಮುಸ್ತಫಾ ಹಾಗೂ ಇಸ್ಮಾಯಿಲ್ ಕಂಡಕರೆ ಅವರ ಮಾರಕ ಬೌಲಿಂಗ್ ದಾಳಿಯಲ್ಲಿ ನಿಗದಿತ ಆರು ಓವರ್‌ಗಳಲ್ಲಿ ಚಿಕ್ಕಮಗಳೂರು ತಂಡವನ್ನು ೪೬ ರನ್‌ಗಳಿಗೆ ಕಟ್ಟಿ ಹಾಕಿತು. ಕೊಡಗು ತಂಡದ ಉಪನಾಯಕ ಎ.ಎಸ್.ಮುಸ್ತಫಾ ಅವರ ಬೊಂಬಾಟ್ ೪೫ ರನ್‌ಗಳ ಬ್ಯಾಟಿಂಗ್ ಪ್ರದರ್ಶನಿಂದ ಸುಲಭದ ಗೆಲುವು ದಾಖಲಿಸಿತು.
ಎರಡನೇ ಪಂದ್ಯದಲ್ಲಿ ಮಂಡ್ಯದ ವಿರುದ್ಧ ಟಾಸ್ ಸೋತು ಮೊದಲು ಬೌಲ್ ಮಾಡಿದ ಕೊಡಗು ತಂಡವು ಬಲಿಷ್ಠ ಮಂಡ್ಯ ತಂಡವನ್ನು ನಿಗದಿತ ಆರು ಓವರ್‌ಗಳಲ್ಲಿ ಕೇವಲ ೪೨ ರನ್‌ಗಳಿಗೆ ಕಟ್ಟಿ ಹಾಕಿದರು. ೪೩ ರನ್ ಗುರಿಯನ್ನು ಬೆನ್ನಟ್ಟಿದ ಕೊಡಗು ತಂಡವು ತಂಡದ ಉಪನಾಯಕ ಎ.ಎಸ್.ಮುಸ್ತಫಾ, ಹೇಮಂತ್ ಹಾಗೂ ಆದರ್ಶ್ ಅವರ ಬ್ಯಾಟಿಂಗ್ ಮುಖಾಂತರ ಗೆಲುವು ಸಾಧಿಸಿ ಎಫ್ ಗುಂಪಿನಲ್ಲಿ ಮೊದಲು ಸ್ಥಾನ ಪಡೆದು ಫ್ರೀ ಕ್ವಾಟರ್ ಫೈನಲ್ ಪ್ರವೇಶಿಸಿತು.
ಫ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕೋಲಾರ ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬೌಲ್ ಮಾಡಿದ ಕೊಡಗು ತಂಡವು ೪ ಓವರ್‌ಗಳಿಗೆ ೪೨ ರನ್‌ಗಳಿಗೆ ಕೋಲಾರ ತಂಡವನ್ನು ಕಟ್ಟಿ ಹಾಕಿತು. ಗುರಿಯನ್ನು ಬೆನ್ನಟ್ಟಿದ ಕೊಡಗು ತಂಡವು ಕೋಲಾರ ತಂಡದ ಮೊದಲ ಓವರ್‌ನಲ್ಲಿ ಹೇಮಂತ್ ಮಾಸ್ಟರ್ ೧೫ ರನ್‌ಗಳಿಸಿ ಕೊಡಗು ತಂಡಕ್ಕೆ ಗೆಲುವಿನ ದಡ ಸೇರಿಸಲು ಅವಕಾಶ ಮಾಡಿಕೊಟ್ಟರು. ಅಲ್ಲದೇ, ಕೊನೆಯ ಓವರ್‌ನಲ್ಲಿ ಇಸ್ಮಾಯಿಲ್ ಕಂಡಕರೆ ಅವರ ಅದ್ಬುತ ಬ್ಯಾಟಿಂಗ್ ನೆರವಿನಿಂದ ಕ್ವಾಟರ್ ಫೈನಲ್ ಹಂತಕ್ಕೆ ಕೊಡಗು ತಂಡ ತಲುಪಿತು.
ಕ್ವಾಟರ್ ಫೈನಲ್ ಪಂದ್ಯದಲ್ಲಿ ಮಂಗಳೂರು ತಂಡದ ವಿರುದ್ಧ ಮೊದಲು ಬಾಲ್ ಮಾಡಿದ ಕೊಡಗು ತಂಡದ ಎ.ಎಸ್.ಮುಸ್ತಫಾ, ಇಸ್ಮಾಯಿಲ್ ಕಂಡಕರೆ, ತಂಡದ ನಾಯಕ ಎ.ಮಂಜು ಹಾಗೂ ಆಂಟೋಣಿ ಅವರ ಮಾರಕ ಬೌಲಿಂಗ್ ದಾಳಿಯಲ್ಲಿ ಮಂಗಳೂರು ತಂಡವನ್ನು ನಿಗದಿತ ೪ ಓವರ್‌ಗಳಿಗೆ ೨೫ ರನ್‌ಗಳಿಗೆ ಕಟ್ಟಿ ಹಾಕಿದರು. ಆದರ್ಶ್ ಅವರ ಬ್ಯಾಟಿಂಗ್ ನೆರವನಿಂದ ಎರಡು ಓವರ್‌ನಲ್ಲಿ ಕೊಡಗು ತಂಡವು ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಬೆಂಗಳೂರು ತಂಡದ ವಿರುದ್ಧ ಕೊನೆಯ ಬಾಲ್‌ವರೆಗೆ ಹೋರಾಟ ನಡೆಸಿ ಕೊಡಗು ತಂಡವು ವಿರೋಜಿತ ಸೋಲು ಕಂಡಿತು. ಕೊಡಗು ತಂಡದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ತಂಡದ ನಾಯಕ ಬಿ.ಮಂಜು, ಉಪನಾಯಕ ಎ.ಎಸ್.ಮುಸ್ತಫಾ, ಇಸ್ಮಾಯಿಲ್ ಕಂಡಕರೆ, ಹೇಮಂತ್, ಎಂ.ಕೆ.ಆದರ್ಶ್, ಆಂಟೋಣಿ, ಜಯಪ್ರಕಾಶ್, ಶಿವರಾಜ್, ರೆಜಿತ್ ಕುಮಾರ್ ಗುಹ್ಯ, ಪ್ರೇಮ್, ವಿನೋದ್.ಕೆ.ಎಂ, ಸಂತೋಷ್ ರೈ, ನವೀನ್ ಸುವರ್ಣ, ಹಾಗೂ ಲೋಹಿತ್ ಸ್ಥಾನ ಪಡೆದಿದ್ದರು.