ಕ್ರಿಕೆಟ್: ಕರವಲೆ ಭಗವತಿ ಚಾಂಪಿಯನ್

MDK07
Published on

ಮಡಿಕೇರಿ: ವೈಲ್ಡ್ ಮಾಸ್ಟರ್ಸ್ ಸೀಸನ್ ೩ ಟಿ-೧೦ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ಸ್ ಆಗಿ ಕರವಲೆ ಭಗವತಿ ತಂಡ ಹೊರಹೊಮ್ಮಿದೆ.


ದ್ವಿತೀಯ ಸ್ಥಾನವನ್ನು ಮ್ಯಾಕ್ಸ್ ವೆಲ್ ತಂಡ ತನ್ನದಾಗಿಸಿಕೊಂಡಿದೆ. ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ೬ ತಂಡಗಳನ್ನು ಒಳಗೊಂಡು ಲೀಗ್ ಮಾದರಿಯಲ್ಲಿ ನಡೆದ ಕ್ರೀಡಾಕೂಟ ಸಮಾಪ್ತಿಗೊಂಡಿತು.


ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಮ್ಯಾಕ್ಸ್‌ವೆಲ್ ತಂಡ ನಿಗದಿತ ೧೦ ಓವರ್‌ಗಳಲ್ಲಿ ೬ ವಿಕೆಟ್‌ಗಳ ನಷ್ಟಕ್ಕೆ ೬೨ ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಗುರಿಬೆನ್ನಟ್ಟಿದ ಕರವಲೆ ಭಗವತಿ ತಂಡ ಕೇವಲ ೭ ಓವರ್‌ಗಳಲ್ಲಿ ಒಂದೇ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.


ಇದಕ್ಕೂ ಮೊದಲು ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಕಿಂಬರ್ಲಿ ಟಿ-೧೦ ತಂಡವು ೧೦ ಓವರ್‌ಗಳಲ್ಲಿ ೪ ವಿಕೆಟ್‌ಗಳ ನಷ್ಟಕ್ಕೆ ೮೧ ರನ್‌ಗಳಿಸಿತು. ಇದನ್ನು ಬೆನ್ನಟ್ಟಿದ ಕರವಲೆ ಭಗವತಿ ತಂಡ ೯.೨ ಓವರ್‌ಗಳಲ್ಲಿ ೪ ವಿಕೆಟ್‌ಗಳ ನಷ್ಟಕ್ಕೆ ಗುರಿ ಸಾಧಿಸಿ ಫೈನಲ್ ಪ್ರವೇಶಿಸಿತು.


ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕರವಲೆ ಭಗವತಿಯ ಪ್ರಿನ್ಸ್ ಕುಶಾಲಪ್ಪ ಪಡೆದುಕೊಂಡರು. ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಕರವಲೆ ಭಗವತಿ ತಂಡದ ಸಂದೇಶ್ ರೈ ಪಡೆದುಕೊಂಡರು. ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಕಿಂಬರ್ಲಿ ತಂಡದ ಸಾಜಿದ್ ಅವರು ತಮ್ಮದಾಗಿಸಿಕೊಂಡರು. ಅತ್ಯುತ್ತಮ ಕೀಪರ್ ಪ್ರಶಸ್ತಿಯನ್ನು ಶ್ರೀ ಕೋಟೆ ಮಹಾಗಣಪತಿ ತಂಡದ ಖಬೀರ್ ಪಡೆದುಕೊಂಡರು. ಉದಯೋನ್ಮುಖ ಆಟಗಾರನಾಗಿ ಮ್ಯಾಕ್ಸ್ ವೆಲ್ ಟಿ-೧೦ ತಂಡದ ವಿವಾನ್ ಶೆಟ್ಟಿ ಪಡೆದುಕೊಂಡರು. ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕರವಲೆ ಭಗವತಿಯ ವಿಕ್ರಂ ಸಾಗರ್ ತಮ್ಮದಾಗಿಸಿಕೊಂಡರು.


ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಪ್ರಮುಖ ಡಾ.ಮಂತರ್ ಗೌಡ, ಕ.ಸಾ.ಪ ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೇಕಲ್ ನವೀನ್, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಹಾಗೂ ಉದ್ಯಮಿ ಸುಚಿನ್ ಶೆಟ್ಟಿ, ವೈಲ್ಡ್ ಮಾಸ್ಟರ್ಸ್‌ನ ರವಿಕಿರಣ್, ರಿಷಿತ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net