ಮೈಸೂರಿನಲ್ಲಿ ಕ್ರಿಕೆಟ್ ಮೈದಾನ ಸ್ಥಳಾಂತರ

mysore
Published on

ಮೈಸೂರು: ಉದ್ದೇಶಿತ ಕ್ರಿಕೆಟ್ ಮೈದಾನವನ್ನು ಸಾತಗಳ್ಳಿಯಿಂದ ಇಲವಾಲ ಕಡೆಗೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ. ಸಾತಗಳ್ಳಿಯ ನಿಗದಿಪಡಿಸಿದ್ದ ಪ್ರದೇಶವು ತಗ್ಗಿನಲ್ಲಿದೆ. ಮೈದಾನಕ್ಕೆ ಇದು ಸೂಕ್ತ ಅಲ್ಲ ಎಂಬ ಭಾವನೆ ವ್ಯಕ್ತವಾಗಿದೆ. ಎತ್ತರದಲ್ಲಿರುವ ಇಲವಾಲದಲ್ಲಿ ಮೈದಾನಕ್ಕೆ ಜಾಗ ನೀಡಲು ಮುಡಾ ಮುಂದಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.

 ನಗರದಲ್ಲಿ ಪರಿಶೀಲನಾ ಕಾರ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.  

ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ಕೊಡುತ್ತಿಲ್ಲ. ಜತೆಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಂಡಿದ್ದು, ಅದಕ್ಕಾಗಿ ಪ್ರತ್ಯೇಕ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.

ಅನುದಾನ ಕೊರತೆ ಇಲ್ಲ. ಸದ್ಯಕ್ಕೆ ಮುಡಾದಲ್ಲಿ 400 ಕೋಟಿ ರೂ. ಇದೆ. ಈ ಹಣವನ್ನು ಬಳಕೆ ಮಾಡಿಕೊಳ್ಳಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಹಣದ ಮೂಲಕ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಸಿಎ ನಿವೇಶನಗಳು ಸದ್ಬಳಕೆ ಆಗುತ್ತಿಲ್ಲ. ಹಂಚಿಕೆಯಾಗಿ 30 ವರ್ಷವಾದರೂ ಆ ಜಾಗದಲ್ಲಿ ಕಟ್ಟಡ ನಿರ್ಮಿಸಿಲ್ಲ. ಇಂತಹ ನಿವೇಶನವನ್ನು ವಾಪಸ್ ಪಡೆದುಕೊಳ್ಳಲಾಗುವುದು. ಜತೆಗೆ, ಸಿಎ ನಿವೇಶನವನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ, ಆರ್ಥಿಕ ಚಟುವಟಿಕೆಯನ್ನೂ ಪರಿಶೀಲನೆ ಮಾಡಲಾಗುವುದು. ನಿಯಮ ಉಲ್ಲಂಘನೆಯಾಗಿದ್ದರೆ ಸಿಎ ನಿವೇಶನವನ್ನು ರದ್ದುಪಡಿಸಿ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

20-30 ವರ್ಷದಿಂದ ಮುಡಾ ಕಟ್ಟಡಗಳ ಬಾಡಿಗೆ ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ ಎಸ್‌ಆರ್‌ಎಸ್ ದರದ ಪ್ರಕಾರ ಬಾಡಿಗೆಯನ್ನು ಪರಿಷ್ಕರಣೆ ಮಾಡಲಾಗುವುದು. ಇದರಿಂದ ಬಾಡಿಗೆ ರೂಪದಲ್ಲಿ ನಾಲ್ಕು ಪಟ್ಟು ಆದಾಯ ಹರಿದು ಬರಲಿದೆ. ಮುಡಾ ಆಸ್ತಿಗಳ ಸಂರಕ್ಷಣೆಗೂ ಕ್ರಮ ವಹಿಸಲಾಗುವುದು ಎಂದರು.

ಪೆರಿಫೆರಲ್ ರಿಂಗ್‌ರೋಡ್ ಡಿಪಿಆರ್‌ಗೆ ಟೆಂಡರ್

ನಗರದಾಚೆ ಹೊರ ಪರಿಧಿಯ ರಸ್ತೆಯ (ಪೆರಿಫೆರಲ್ ರಿಂಗ್ ರೋಡ್) ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರು ಮಾಡಲಾಗುವುದು. ಟೆಂಡರ್ ಕರೆದು ಏಜೆನ್ಸಿಗೆ ಡಿಪಿಆರ್ ತಯಾರಿಸುವ ಕೆಲಸವನ್ನು ವಹಿಸಲಾಗುವುದು ಎಂದು ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net