

ಮಡಿಕೇರಿ:
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜನಾಂಗದ ಮಹಿಳೆಯರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಪಂದ್ಯಾವಳಿಯ ಗೌರವ ಸಲಹೆಗಾರರಾದ ಮೂಟೇರ ಪುಷ್ಪಾವತಿ ತಿಳಿಸಿದರು. ಈ ತಿಂಗಳ ೨೭ ಮತ್ತು ೨೮ರಂದು ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ’ಗೌಡ ಮುಕ್ತ ಮಹಿಳಾ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಜಿಲ್ಲೆಯ ಗೌಡ ಜನಾಂಗದವರನ್ನು ಒಟ್ಟುಗೂಡಿಸಿ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಕೊಡಗು ಗೌಡ ಯುವವೇದಿಕೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಸಂದರ್ಭದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗದ ಮಹಿಳೆಯರಿಗಾಗಿ ಈ ಪಂದ್ಯಾಟ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೌಡ ಜನಾಂಗದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಕ್ರೀಡಾಪಟುಗಳಾಗಿ ತಮ್ಮ ತಮ್ಮ ತಂಡವನ್ನು ರಚಿಸಿಕೊಂಡು ಯಾವುದೇ ವಯಸ್ಸಿನ ಮಿತಿ ಇಲ್ಲದ ೫ ಓವರ್‌ನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ. ಒಂದು ತಂಡದಲ್ಲಿ ಗರಿಷ್ಠ ೯ ಆಟಗಾರರು ಇರಬೇಕು. ಓವರ್ ಆರ್ಮ್ ಬೌಲಿಂಗ್‌ನೊಂದಿಗೆ ಥ್ರೋ ಬೌಲಿಂಗ್‌ಗೂ ಅವಕಾಶ ಇರುತ್ತದೆ. ಟೆನ್ನಿಸ್ ಬಾಲ್ ಕ್ರಿಕೆಟ್‌ನ ಇನ್ನಿತರ ಎಲ್ಲಾ ನಿಯಮಗಳನ್ನೂ ಅಳವಡಿಸಲಾಗಿರುತ್ತದೆ. ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ೨೦ ಸಾವಿರ ರೂ., ದ್ವಿತೀಯ ಬಹುಮಾನ ೧೦ ಸಾವಿರ ರೂ. ಹಾಗೂ ತೃತೀಯ ಬಹುಮಾನ ೫ ಸಾವಿರ ರೂ. ಇರುತ್ತದೆ. ವೈಯಕ್ತಿಕ ಬಹುಮಾನಗಳಾದ ವುಮೆನ್ ಆಫ್‌ದ ಟೂರ್ನಮೆಂಟ್, ವುಮೆನ್ ಆಫ್‌ದ ಮ್ಯಾಚ್, ಬೆಸ್ಟ್ ಬ್ಯಾಟರ್, ಬೆಸ್ಟ್ ವಿಕೆಟ್ ಕೀಪರ್ ಸೇರಿದಂತೆ ಹಲವು ಬಹುಮಾನಗಳನ್ನೂ ಕೊಡಲಾಗುತ್ತದೆ. ಈಗಾಗಲೇ ತಂಡಗಳ ನೋಂದಾಣಿಗಾಗಿ ಕರೆಗಳು ಬರುತ್ತಿದ್ದು, ಆಸಕ್ತರು ತಂಡದ ನೊಂದಾಣಿಗಾಗಿ ಪರಿಚನ ಸೋನಿ ಶರತ್ ೭೬೭೬೪೫೨೧೦೭, ಪುದಿಯನೆರವನ ರೇವತಿ ರಮೇಶ್ ೯೬೬೩೨೫೪೮೨೯ ಹಾಗೂ ಮೂಟೇರ ಪುಷ್ಪಾವತಿ ೬೩೬೨೮೧೪೬೫೯ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಪಂದ್ಯಾವಳಿ ಸಂಚಾಲಕಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ ಹೆಸರು ನೋಂದಾಯಿಸಲು ಏ. ೨೨ ಕಡೆಯ ದಿನವಾಗಿದೆ. ದಿನಾಂಕ ಏ. ೨೭ ಮತ್ತು ಏ.೨೮ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲಿಗೆ ಗ್ರಾಮವಾರು ಸಾಂಸ್ಕೃತಿಕ ಪೈಪೋಟಿ ನಡೆಯುತ್ತದೆ. ಈ ಪಂದ್ಯಾಟವನ್ನು ನಡೆಸಿಕೊಡಲು ಈಗಾಗಲೇ ಒಂದು ಅನುಭವಿ ತಂಡವನ್ನು ರಚಿಸಲಾಗಿದ್ದು, ಸಂಚಾಲಕರಾಗಿ ಪುದಿಯನೆರವನ ರೇವತಿ ರಮೇಶ್, ಗೌರವ ಸಲಹೆಗಾರರಾಗಿ ಮೂಟೇರ ಪುಷ್ಪಾವತಿ, ಸಹ ಸಂಚಾಲಕರಾಗಿ ಚೊಕ್ಕಾಡಿ ಪ್ರೇಮ ರಾಘವಯ್ಯ, ತಳೂರು ಉಷಾರಾಣಿ, ದುಗ್ಗಳ ಕಾವ್ಯಾ ಕಪಿಲ್, ಕುದುಕುಳಿ ಇಂದಿರಾ ಭರತ್, ಪಡನೋಳನ ಪವಿತ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ಮಹಿಳಾ ಕ್ರಿಕೆಟ್ ಕಪ್ ಸಹಸಂಚಾಲಕಿ ಚೊಕ್ಕಾಡಿ ಪ್ರೇಮರಾಘವಯ್ಯ ಹಾಗೂ
ದುಗ್ಗಳ ಕಾವ್ಯ ಕಪಿಲ್ ಇದ್ದರು.