ಕ್ರಿಕೆಟ್: ಚರಿಷ್ ರಾಮ್ ತಂಡ ಚಾಂಪಿಯನ್

criecket
Published on


ಮಡಿಕೇರಿ: ಮಾದಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಇತ್ತೀಚೆಗೆ ನಡೆದ ಪ್ರಥಮ ವರ್ಷದ ಹಿಂದು ಮಲಯಾಳಿ ಕುಟುಂಬ ಮಾದಾಪುರ ಆಯೋಜನೆ ಮಾಡಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಚರಿಷ್ ರಾಮ್ ಐಗೂರು ತಂಡ ಪ್ರಶಸ್ತಿ ಗೆದ್ದುಕೊಂಡರೆ, ಇಲವೆನ್ ಸ್ಟಾರ್ಸ್‌ ಕಂಬಿಬಾಣೆ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.


ಮಲಯಾಳಿ ಬಾಂಧವರೆಲ್ಲ ಒಂದು ಕಡೆ ಸೇರಿ ಸಂಭ್ರಮಿಸುವ ಉದ್ದೇಶದಿಂದ ಈ ಒಂದು ಕ್ರೀಡಾಕೂಟವನ್ನು ಮಾದಾಪುರದ ಹಿಂದು ಮಲಯಾಳಿ ಕುಟುಂಬದಿಂದ ಆಯೋಜನೆ ಮಾಡಲಾಗಿತ್ತು. ಈ ಜಿಲ್ಲಾ ಮಟ್ಟದ ಮಲಯಾಳಿ ಬಾಂಧವರ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ೨೫ ತಂಡಗಳು ಭಾಗವಹಿಸಿತ್ತು. ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಿತು.


ಪುರುಷರ ಕ್ರಿಕೆಟ್‌ನ ಫೈನಲ್ಸ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕಂಬಿಬಾಣೆ ತಂಡ ೫ ಓವರ್‌ಗಳಿಗೆ ೩೮ ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ನಂತರ ಬ್ಯಾಟ್ ಮಾಡಿದ ಐಗೂರು ತಂಡ ೩ ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಬೆಸ್ಟ್ ಬೌಲರ್ ಐಗೂರು ತಂಡದ ಸುದರ್ಶನ್ ಮತ್ತು ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಐಗೂರು ತಂಡದ ಸಚಿನ್ ಪಡೆದುಕೊಂಡರು.


ಹಗ್ಗಜಗ್ಗಾಟ : ಮಹಿಳೆಯರಿಗೆ ಆಯೋಜಿಸಿದ್ದ ಹಗ್ಗ ಜಗ್ಗಾಟದಲ್ಲಿ ಟೀಮ್ ಭಜರಂಗಿ ಐಗೂರು ತಂಡ ಪ್ರಥಮ ಸ್ಥಾನ ಗಳಿಸಿದರೆ, ಚಾಲೆಂಜರ್ಸ್‌ ಗುಡ್ಲೂರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.


ಟೀಮ್ ಇಲವೆನ್ ಮಾಲ್ದಾರೆ ಚಾಂಪಿಯನ್: ಮಹಿಳೆಯರಿಗಾಗಿ ಪ್ರಥಮ ಬಾರಿಗೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಟೀಮ್ ಇಲವೆನ್ ಮಾಲ್ದಾರೆ ತಂಡ ಪ್ರಥಮ ಸ್ಥಾನಗಳಿದರೆ, ದ್ವಿತೀಯ ಸ್ಥಾನವನ್ನು ಚಾಲೆಂಜರ್ಸ್‌ ಗುಡ್ಲೂರು ಪಡೆದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮಾಲ್ದಾರೆ ತಂಡ ನಾಲ್ಕು ಓವರುಗಳಿಗೆ ಒಂದು ವಿಕೇಟ್ ಕಳೆದುಕೊಂಡು ೪೮ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಗುಡ್ಲೂರು ತಂಡ ಕೇವಲ ೨೩ ರನ್ನುಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.


ಸಮಾರೋಪ ಸಮಾರಂಭದಲ್ಲಿ ಹಿಂದು ಮಲಯಾಳಿ ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯನ್ ಮಾತನಾಡಿ, ಮಲಯಾಳಿ ಬಾಂಧವರು ಇದೇ ರೀತಿಯಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಲಯಾಳಿ ಸಮುದಾಯವನ್ನು ಒಂದು ಮಾಡುವ ಕೆಲಸ ಆಗಬೇಕಾಗಿದೆ. ಅದೇ ರೀತಿ ನಮ್ಮ ಹಬ್ಬವಾದ ವಿಷು ಮತ್ತು ಓಣಂ ದಿನ ಸರ್ಕಾರಿ ರಜೆ ನೀಡುವಂತೆ ನಾವೆಲ್ಲರೂ ಸೇರಿ ಮುಖ್ಯಮಂತ್ರಿಗಳಿ ಮನವಿ ಮಾಡಬೇಕು. ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲಾ ಭಾಗಗಳಲ್ಲೂ ವರ್ಷಕ್ಕೊಮ್ಮೆ ಕಾರ್ಯಕ್ರಮ ಆಯೋಜನೆ ಮಾಡಿ ಅದಕ್ಕೆ ಮಲಯಾಳಿ ಸಮುದಾಯದ ಎಲ್ಲಾ ಬಾಂಧವರೂ ಸಹಕರಿಸಬೇಕು. ಹಿಂದು ಮಲಯಾಳಿ ಕುಟುಂಬ ಮಾದಾಪುರ ಆಯೋಜನೆ ಮಾಡಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳೆಯರಿಗೂ ಕ್ರಿಕೆಟ್ ಆಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ಸನ್ಮಾನ: ನಿವೃತ್ತ ಯೋಧರಾದ ಕ್ಯಾಪ್ಟನ್ ಕುಮಾರ್(ಮುತ್ತು) ಅವರಿಗೆ ಹಿಂದೂ ಮಲಯಾಳಿ ಕುಟುಂಬ ಮಾದಾಪುರದ ವತಿಯಿಂದ ಸಮಾರೋಪ ಸಮಾರಂಭದಲ್ಲಿ ಗೌರವಿಸಿ ಸನ್ಮಾನ ಮಾಡಲಾಯಿತು.


ನಾಪೋಕ್ಲು ಮಲಯಾಳಿ ಸಮಾಜದ ಅಧ್ಯಕ್ಷರಾದ ಅನಿಲ್, ವಿರಾಜಪೇಟೆಯ ಸುಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದು ಮಲಯಾಳಿ ಸಮಾಜ ಜಿಲ್ಲಾ ಸಲಹೆಗಾರರಾದ ವಿನೋಬ್, ಸ್ವಯಂ ಸೇವಕರಾದ ಪದ್ಮನಾಭ, ಉದ್ಯಮಿ ಸುರೇಶ್ ಚಾಮಿ, ವಿರಾಜಪೇಟೆ ಮಲಯಾಳಿ ಸಮಾಜ ಕಾರ್ಯದರ್ಶಿ ಸಿಜು ಮೋನ್, ವಾಸು, ಶ್ರೀನಿಧಿ ವಿಶ್ವನಾಥ್, ಉಷಾ ಮುರಳಿ, ಸುರೇಶ್ ಬಾವೆ, ಅಜೀಶ್ ಐಗೂರು, ಕುಮಾರ (ಮುತ್ತು), ಅನೂಪ್, ಪ್ರಭಾ, ರಾಜನ್ ಟಿ.ಕೆ., ಅಶೋಕ ಕಾರೆಕಾಡು, ಮಾನಸ ಮಣಿಕಂಠ, ಶೀಲಾ ಶಶಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net