

ಬೆಳಗಾವಿ : ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಸೋತ ಬೆಟ್ಟಿಂಗ್ ಹಣ ಕೊಡಲು ಹಿಂದೇಟು ಹಾಕಿದ್ದ ಇಬ್ಬರಿಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ ಘಟನೆ ಖಾನಾಪುರದಲ್ಲಿ ನಡೆದಿದೆ.
ಖಾನಾಪುರದ ಅಲ್ತಾಮೇಶ ನಾಯ್ಕ ಮತ್ತು ಇರ್ಫಾನ್ ಸುಬಾನಿಗೆ ಚಾಕು ಇರಿಯಲಾಗಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಚಾಕು ಇರಿದ ಆಸೀಫ್ ಜಮಾದಾರ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ತೆರಳಿದ್ದ ಖಾನಾಪುರ ತಾಲೂಕಿನ ಯುವಕರು ಒಂದೇ ಕಡೆ ವಾಸವಾಗಿದ್ದರು. ಆಗ ಲೋಂಡಾದ ಆಸೀಫ್‌ನೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿದ್ದ ಇಬ್ಬರೂ ಊರಿಗೆ ಮರಳಿದರೂ ಸೋತ ಹಣ ಕೊಡದೇ ಸತಾಯಿಸುತ್ತಿದ್ದರು ಎಂದು ಭಾನುವಾರ ಸಂಜೆ ಖಾನಾಪುರ ತಾಲೂಕಿನ ಲೋಂಡಾದಲ್ಲಿ ಜಗಳ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಾಗ್ವಾದ ವಿಕೋಪಕ್ಕೆ ತಿರುಗಿ ಆಸೀಫ್ ಇಬ್ಬರಿಗೂ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಗಾಯಾಳುಗಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.