

ಕೊಡಗು: ನಿಯತ್ತು ಹಾಗೂ ಸಾಹಸಕ್ಕೆ ಹೆಸರಾಗಿದ್ದ 'ಪೊಲೀಸ್ ರ‍್ಯಾಂಬೋ'ಗೆ ಹೃದಯಾಘಾತವಾಗಿದ್ದು, ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಭಾವಪೂರ್ಣವಾಗಿ ಅಂತಿಮ ಸಂಸ್ಕಾರ ನಡೆಸಲಾಯಿತು.
ಶುನಕ ರ‍್ಯಾಂಬೋ ಕೊಡಗು ಪೊಲೀಸ್ ಶ್ವಾನದಳದಲ್ಲಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸಿತ್ತು. ಬುಧವಾರ ಮಂಗಳೂರಿಗೆ ಕರ್ತವ್ಯಕ್ಕೆ ಕರೆದೊಯ್ಯಲಾಗಿದ್ದ ರ‍್ಯಾಂಬೋಗೆ ಅಲ್ಲಿನ ಬಿಸಿಲ ತಾಪ ತಡೆಯಲಾಗದೆ ಹೃದಯಾಘಾತವಾಗಿದೆ.
ರ‍್ಯಾಂಬೋ ಏಳು ವರ್ಷಗಳಿಂದ ಬಾಂಬ್ ಪತ್ತೆ ದಳದಲ್ಲಿದ್ದು ಸಾಹಸ ಮೆರೆದಿತ್ತು. ಮಾತ್ರವಲ್ಲ ರಾಜ್ಯದಲ್ಲಿ ಗಣ್ಯಾತಿಗಣ್ಯರ ಭದ್ರತೆಯಲ್ಲೂ ಕರಾರುವಾಕ್ಕಾಗಿ ಕಾರ್ಯನಿರ್ವಹಿಸಿತ್ತು. ಗುರುವಾರ ಕೊಡಗಿನ ಪೊಲೀಸ್ ಕವಾಯತು ಮೈದಾನದಲ್ಲಿ ರ‍್ಯಾಂಬೋಗೆ ಕೊಡಗು ಪೊಲೀಸ್ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು. ಬಳಿಕ ಇಲಾಖೆ ವತಿಯಿಂದಲೇ ಅಂತಿಮಸಂಸ್ಕಾರ ನಡೆಸಲಾಯಿತು.