ಸ್ಮಶಾನ ಜಾಗ ಪರಬಾರೆ ಮಾಡಿದ್ದಕ್ಕೆ ವಿರೋಧ

Cremation ground, Nidagundi, Tehsildar, petition of various communities,
ನಿಡಗುಂದಿ ಪಟ್ಟಣದಲ್ಲಿ ವಿವಿಧ ಸಮುದಾಯದ ನಾಗರಿಕರು, ಮಹಿಳೆಯರು ತಹಸೀಲ್ದಾರ್ ಎ.ಡಿ.ಅಮರವಾಡಗಿ ಅವರಿಗೆ ಮನವಿ ಸಲ್ಲಿಸಿದರು. ಎಸ್.ಕೆ.ಗೌಡರ, ಬಸವರಾಜ ಬಾಗೇವಾಡಿ, ಆಂಜನೇಯ ಮೋಪಗಾರ, ಶೇಖರ ದೊಡಮನಿ, ತಿರುಪತಿ ಬಂಡಿವಡ್ಡರ, ಸಂಗಮೇಶ ಬಳಿಗಾರ, ಗಣೇಶ ಕೂಚಬಾಳ, ಡಾ.ಸಂತೋಷ ಬಸರಕೋಡ ಇತರರಿದ್ದರು.
Published on

ನಿಡಗುಂದಿ: ಕಳೆದ ನೂರಾರು ವರ್ಷಗಳಿಂದ ಶವಸಂಸ್ಕಾರ ನಡೆಸುತ್ತಿದ್ದ ಸ್ಮಶಾನ ಜಾಗವನ್ನು ಪರಬಾರೆ ಮಾಡಿ ಭೂಪರಿವರ್ತನೆಗೊಳಿಸಿದ್ದನ್ನು ಖಂಡಿಸಿ ತಾಲೂಕು ಆಡಳಿತಕ್ಕೆ ವಿವಿಧ ಸಮುದಾಯದ ಸಾರ್ವಜನಿಕರು ಬುಧವಾರ ಮನವಿ ಸಲ್ಲಿಸಿದರು.

ಪಟ್ಟಣದ ನೇಕಾರ, ವಡ್ಡರ, ಗೊಂದಳಿ, ಭಜಂತ್ರಿ, ವಾಲ್ಮೀಕಿ, ಮಚಗಾರ, ಸಮಗಾರ, ಹರಿಜನ ಸೇರಿದಂತೆ ವಿವಿಧ ಸಮುದಾಯದವರು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಅಪಾರ ಪುರುಷರು, ಮಹಿಳೆಯರು ಹಾಗೂ ಯುವಕರು ಪಾಲೊಂಡಿದ್ದರು.

ಗ್ರಾಮದೇವತೆ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಕಾಲೇಜು ರಸ್ತೆಯ ಮೂಲಕ ಸಂಚರಿಸಿತು. ಭ್ರಷ್ಟ ಅಧಿಕಾರಿಗಳು ಹಾಗೂ ಸಮಾಜಘಾತಕ ಶಕ್ತಿಗಳ ವಿರುದ್ಧ ಘೋಷಣೆ ಕೂಗುತ್ತ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಭೆ ಸೇರಿ ಕೆಲಕಾಲ ಘೋಷಣೆ ಹಾಕಿದರು.

ಮುಖಂಡರಾದ ಎಸ್.ಕೆ.ಗೌಡರ, ಬಸವರಾಜ ಬಾಗೇವಾಡಿ, ಆಂಜನೇಯ ಮೋಪಗಾರ, ಶೇಖರ ದೊಡಮನಿ, ತಿರುಪತಿ ಬಂಡಿವಡ್ಡರ, ಸಂಗಮೇಶ ಬಳಿಗಾರ, ಗಣೇಶ ಕೂಚಬಾಳ, ಡಾ.ಸಂತೋಷ ಬಸರಕೋಡ ಮಾತನಾಡಿ, ಹಲವಾರು ಸಮುದಾಯಗಳ ಸ್ಮಶಾನಕ್ಕಾಗಿ ನಿಡಗುಂದಿಯ ಸವೇ ನಂ.314ರಲ್ಲಿ 3.20 ಎಕರೆ ಜಾಗ ಬಿಡಲಾಗಿತ್ತು. ಕಳೆದ ನೂರಾರು ವರ್ಷಗಳಿಂದ ಈ ಸಮುದಾಯದವರು ಇದೇ ಸ್ಮಶಾನದಲ್ಲಿ ಶವಸಂಸ್ಕಾರ ನಡೆಸುತ್ತಿದ್ದಾರೆ. ಆದರೆ, ಕೆಲ ಕಾಣದ ಕೈಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಸೇರಿ ವಿವಿಧ ಸಮುದಾಯಗಳ ಸುಳ್ಳು ಪಂಚನಾಮೆ ಹಾಗೂ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ಸ್ಮಶಾನ ಜಾಗ ಪರಬಾರೆ ಮಾಡಿದ್ದಾರೆ ಎಂದು ಆರೋಪಿಸಿದರು.

5.12 ಎಕರೆಯಲ್ಲಿ 3.20 ಎಕರೆ ಗುಂಟೆ ಸ್ಮಶಾನವತ್ತಿ ಜಾಗದಲ್ಲಿ ಯಾವ ಸಮಾಜದವರೂ ಶವಸಂಸ್ಕಾರ ನಡೆಸುವುದಿಲ್ಲವೆಂದು ದಾಖಲೆಗಳನ್ನು ನಿರ್ಮಿಸಿ ಭೂಪರಿವರ್ತನೆ ಮಾಡಿದ್ದು ಖಂಡನೀಯವಾಗಿದೆ. ತಹಸೀಲ್ದಾರ್ ಕಚೇರಿ ಹಿಂಭಾಗವೇ ಬರುವ ಈ ಸ್ಮಶಾನ ಜಾಗದಲ್ಲಿ ಈಗಲೂ ಶವಸಂಸ್ಕಾರ ನಡೆಸುತ್ತಾರೆ. ತಹಸೀಲ್ದಾರ್ ಕಚೇರಿ ಮುಂದೆಯೇ ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವುದು ಜಗಜ್ಜಾಹಿರು ಆದರೂ, ಕೆಲವು ಕಾಣದ ಕೈಗಳ ಜತೆ ಅಧಿಕಾರಿಗಳು ಸೇರಿ ಸ್ಮಶಾನದಲ್ಲಿ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಂಚನಾಮೆ ವರದಿ ಸಲ್ಲಿಸಿದ್ದಾರೆ. ನಕಲಿ ದಾಖಲೆಗಳಿಂದ ಭೂಪರಿವರ್ತನೆಗೊಂಡಿದ್ದನ್ನು ರದ್ದುಪಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ವಿವಿಧ ರೀತಿಯಲ್ಲಿ ನಿರಂತರ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ದೇವಾಂಗ ಸಮಾಜದ ಹಿರಿಯರು, ಪಪಂ ಸದಸ್ಯರಾದ ಸಂಜು ಲಮಾಣಿ, ಹನುಮಂತ ಗುಂಡಿನಮನಿ, ನಬಿರಸೂಲ ಬಾಣಕಾರ, ಹನಮಂತ ಬೇವಿನಕಟ್ಟಿ, ರಾಜು ಚಿತ್ರದುರ್ಗ, ಮುಖಂಡರಾದ ಬಸವರಾಜ ಆಲಕೊಪ್ಪರ, ರವಿ ಭೋವಿವಡ್ಡರ, ಆನಂದ ಮಂಕಣಿ, ಬಾಲಚಂದ್ರ ನಾಗರಾಳ, ತಮ್ಮಣ್ಣ ಬಂಡಿವಡ್ಡರ, ಮಾರುತಿ ಭಜಂತ್ರಿ, ಮರಿಯಪ್ಪ ಹರಿಜನ, ವಿಠ್ಠಲ್ ಜೋಶಿ, ಸುರೇಶ ಸಣ್ಣಮಣಿ, ಅಶೋಕ ಹೆಬ್ಬಾಳ, ಸಿದ್ರಾಮೇಶ ಚಲವಾದಿ, ಮಾರುತಿ ಭಜಂತ್ರಿ, ಮುತ್ತು ರೂಡಗಿ, ಬಸವರಾಜ ಗೌಡರ, ನೀಲು ನಾಯಕ, ಲಕ್ಷ್ಮಣ ವಿಭೂತಿ, ರಾಘು ವಡವಡಗಿ, ವೆಂಕಟೇಶ ವಡ್ಡರ, ರಮೇಶ ಮಾಗಿ, ಹೊನ್ನಪ್ಪ ದೊಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net