

ಮೈಸೂರು: ವಿಶ್ವ ಉರುಗ ದಿನಾಚರಣೆ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವಧಾರ ರಕ್ತ ನಿಧಿ ಕೇಂದ್ರದಿಂದ 85 ಸಾವಿರ ಹಾವುಗಳನ್ನು ಸಂರಕ್ಷಣೆ ಮಾಡಿರುವ ಸ್ನೇಕ್ ಶ್ಯಾಮ್ ಅವರನ್ನು ಮಂಗಳವಾರ ಅಭಿನಂದಿಸಲಾಯಿತು.
ನಗರದ ಲಕ್ಷ್ಮೀಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ನೇಕ್ ಶ್ಯಾಮ್, ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವೂ ಮುಖ್ಯ. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಉಪಯುಕ್ತ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಬೇಕು. ಆ ಮೂಲಕ ಪರಿಸರ ಶುದ್ಧವಾಗಿಸುವ ಅಲ್ಪ ಸೇವೆ ಮಾಡಿದಂತಾಗುತ್ತದೆ ಎಂದರು.
ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಒಂದನ್ನೊಂದು ಅವಲಂಬಿಸಿಯೇ ಬದುಕುವ ಕಾರಣ ಪ್ರತಿಯೊಂದಕ್ಕೂ ಪ್ರಾಮುಖ್ಯವಿದೆ. ಎಲ್ಲವನ್ನೂ ಗೌರವಿಸಬೇಕು. ಹಾವುಗಳ ಸಂತತಿ, ಪ್ರಭೇದ, ಹಾವಿನ ಕಡಿತದ ಬಳಿಕ ನಡೆಸುವ ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಕೋವಿಡ್‌ನಂತಹ ಕಷ್ಟ ಕಾಲದಲ್ಲಿಯೂ ಮನೆಗಳಿಗೆ ಹಾವು ಬಂದಾಗ ಸ್ನೇಕ್ ಶ್ಯಾಮ್ ಹಾವುಗಳನ್ನು ಸಂರಕ್ಷಿಸಿದ್ದಾರೆ. ಪರಿಸರ ಸಂರಕ್ಷಣೆ ಜತೆಯಲ್ಲೆ ಧಾರ್ಮಿಕ ಕೇಂದ್ರ ಸ್ಥಾಪಿಸಿರುವುದು ಶ್ಲಾಘನೀಯ. ಪರಿಸರ ಸಂರಕ್ಷಣೆ ವಿಚಾರವಾಗಿ ಸ್ನೇಕ್ ಶ್ಯಾಮ್ ಅವರ ಸೇವೆ ಮತ್ತು ಪರಿಸರ ಕಾಳಜಿಯ ಬಗ್ಗೆ ಶಾಲಾ ಪಠ್ಯದಲ್ಲಿ ಸರ್ಕಾರ ಸೇರಿಸಬೇಕು. ಇದರಿಂದ ಮಕ್ಕಳಲ್ಲಿ ಉರಗ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಮುಖಂಡರಾದ ಜಿ. ರಾಘವೇಂದ್ರ, ಪ್ರಕಾಶ್ ಪ್ರಿಯದರ್ಶನ್, ಪರಮೇಶ್‌ಗೌಡ, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಅಪೂರ್ವ ಸುರೇಶ್, ಬೈರತಿ ಲಿಂಗರಾಜು, ಸುಚಿಂದ್ರ, ಚಕ್ರಪಾಣಿ, ಎಸ್.ಎನ್. ರಾಜೇಶ್, ಸದಾಶಿವ್, ಸಚಿನ್ ನಾಯಕ್, ಸಫಿ, ರಾಕೇಶ್ ಇತರರು ಇದ್ದರು.