ಮಂಡೆಕೋಲು ಲೈಬ್ರರಿಗೆ ಮನ್ನಣೆ : ಗ್ರಂಥಪಾಲಕಿ ಸಾವಿತ್ರಿ ಕಣೆಮರಡ್ಕ ಅವರಿಂದ ವಿವಿಧ ಚಟುವಟಿಕೆ ಅನುಷ್ಠಾನದ ಬಗ್ಗೆ ಉಪನ್ಯಾಸ

New Project (21)
Published on

ವಿಜಯವಾಣಿ ಸುದ್ದಿಜಾಲ ಸುಳ್ಯ ಓದುವ ಹವ್ಯಾಸ ರೂಢಿಸಿಕೊಳ್ಳಲು ಹಾಗೂ ಮಕ್ಕಳಿಗಾಗಿ ಗ್ರಂಥಾಲಯದಲ್ಲಿ ವಿವಿಧ ಚಟುವಟಿಕೆ ಕೈಗೊಂಡು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ ಮಂಡೆಕೋಲು ಗ್ರಂಥಾಲಯದ ಚಟುವಟಿಕೆಗಳು ಶಿವಮೊಗ್ಗಕ್ಕೂ ವಿಸ್ತರಣೆಗೊಳ್ಳಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಡೆಕೋಲು ಗ್ರಂಥಾಲಯದ ಗ್ರಂಥಪಾಲಕಿಯನ್ನು ಆಹ್ವಾನಿಸಿ ಜಿಲ್ಲಾ ವ್ಯಾಪ್ತಿಯ ಗ್ರಾ.ಪಂ ಅಧಿಕಾರಿಗಳಿಗೆ ಈಗಾಗಲೇ ಉಪನ್ಯಾಸ ಕೊಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ನ.21ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಾಗಾರದಲ್ಲಿ ವಿವಿಧ ಅಧಿಕಾರಿಗಳು ಮಾಹಿತಿ ನೀಡಿದರೆ, ಗ್ರಾ.ಪಂ ಗ್ರಂಥಾಲಯವನ್ನು ಹೇಗೆ ಜನಸ್ನೇಹಿ, ಮಕ್ಕಳ ಸ್ನೇಹಿ ಗ್ರಂಥಾಲಯವಾಗಿ ಮಾರ್ಪಡಿಸಬಹುದು ಎಂಬ ಬಗ್ಗೆ ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾ.ಪಂ.ನ ಗ್ರಂಥಪಾಲಕಿ ಸಾವಿತ್ರಿ ರಾಮ್ ಕಣೆಮರಡ್ಕ ಅವರನ್ನು ಆಹ್ವಾನಿಸಲಾಗಿತ್ತು.

ಕಾರ್ಯಾಗಾರದಲ್ಲಿ ಶಿವಮೊಗ್ಗ ಜಿಲ್ಲೆಯ ಮುಖ್ಯ ನಿರ್ವಹಣಾಧಿಕಾರಿ, ವಿವಿಧ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾ.ಪಂ ಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಂಥಾಲಯದ ಮೇಲ್ವಿಚಾರಕರು ಭಾಗವಹಿಸಿದ್ದರು. ಮಂಡೆಕೋಲು ಗ್ರಂಥಾಲಯದ ಮಾದರಿ ಕಾರ್ಯಕ್ರಮಗಳಾದ ಅಮ್ಮನಿಗೊಂದು ಪುಸ್ತಕ, ಯೋಗ, ನೃತ್ಯ, ಯಕ್ಷಗಾನ, ಬೇಸಿಗೆ ತರಬೇತಿ ಶಿಬಿರಗಳನ್ನು ಗ್ರಂಥಾಲಯದಲ್ಲಿ ಆಯೋಜಿಸಿ ಮಕ್ಕಳನ್ನು ಓದಿನತ್ತ ಪ್ರೇರೇಪಿಸುವುದಲ್ಲದೆ ಇನ್ನಿತರ ಕಾರ್ಯಚಟುವಟಿಕೆಗಳಲ್ಲಿ ಅವರನ್ನು ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ಸಾವಿತ್ರಿ ತಮ್ಮ ಉಪನ್ಯಾಸದಲ್ಲಿ ತಿಳಿಸಿದ್ದು ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೇರಿತಗೊಂಡು ತಮ್ಮ ಜಿಲ್ಲೆಯಲ್ಲೂ ಈ ರೀತಿಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಉತ್ಸುಕರಾಗಿದ್ದಾರೆ. ಗ್ರಂಥಾಲಯದ ಚಟುವಟಿಕೆಗಳ ಬಗ್ಗೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಸಾವಿತ್ರಿ ಅವರಿಂದ ಕೊಡಲ್ಪಟ್ಟ ಮಾಹಿತಿಯಿಂದ ಪ್ರೇರಣೆಗೊಂಡು ಶಿವಮೊಗ್ಗಕ್ಕೆ ಆಹ್ವಾನಿಸಿ ಗ್ರಾ.ಪಂ ಅಧಿಕಾರಿಗಳಿಗೆ, ಮೇಲ್ವಿಚಾರಕರಿಗೆ ಮಾಹಿತಿ ನೀಡಲು ಕೇಳಿಕೊಳ್ಳಲಾಯಿತು. ಅಮ್ಮನಿಗೊಂದು ಪುಸ್ತಕ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳನ್ನು ಕರೆಸಿ ಅವರಿಂದ ಸ್ಥಳೀಯ ಮಕ್ಕಳಿಗೆ ಪ್ರತಿಭೆ ಪಸರಿಸುವಂತೆ ಮಾಡುವ ಕಾರ್ಯಕ್ರಮಗಳನ್ನು ಶಿವಮೊಗ್ಗದಲ್ಲೂ ಅಳವಡಿಸುವ ಯೋಚನೆಯಿದ್ದು ಸದ್ಯದಲ್ಲೇ ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತೇವೆ. ಹೇಮಂತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಿವಮೊಗ್ಗ ಜಿಲ್ಲೆ. ರಾಜ್ಯಕ್ಕೆ ಮಾದರಿಯಾದ ಮಂಡೆಕೋಲು ಗ್ರಂಥಾಲಯದ ಚಟುವಟಿಕೆಗಳು ಇತರ ಜಿಲ್ಲೆಗೂ ವಿಸ್ತರಣೆಯಾಗುತ್ತಿರುವ ಬಗ್ಗೆ ಹೆಮ್ಮೆ ಇದೆ. ಗ್ರಂಥಾಲಯ ಈಗಾಗಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಸೌಲಭ್ಯಗಳ ಕೊರತೆ ಇದ್ದಲ್ಲಿ ಅವುಗಳ ಪೂರೈಕೆಗೆ ಸ್ಥಳೀಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ, ಸುಳ್ಯ ತಾ.ಪಂ ಗ್ರಂಥಾಲಯದಲ್ಲಿ ಕೈಗೊಂಡ ಚಟುವಟಿಕೆಗಳಾದ ಸಂಗೀತ ತರಗತಿ, ಯೋಗ, ಯಕ್ಷಗಾನ, ಮಕ್ಕಳಲ್ಲಿ ಓದುವ ಹವ್ಯಾಸ ಹಮ್ಮಿಕೊಳ್ಳಲಾದ ಅಮ್ಮನಿಗೊಂದು ಪುಸ್ತಕ ಸೇರಿದಂತೆ ಹಲವು ಕಾರ್ಯಕ್ರಮಗಳಿಂದಾಗಿ ನಮ್ಮ ಗ್ರಂಥಾಲಯ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಕೆಲಸವನ್ನು ಗುರುತಿಸಿ ಚಟುವಟಿಕೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಇತರ ಜಿಲ್ಲೆಗೂ ಆಹ್ವಾನಿಸಿ ಮಾಹಿತಿ ನೀಡುವಂತೆ ಪ್ರೋತ್ಸಾಹಿಸಿದ್ದರ ಬಗ್ಗೆ ಹೆಮ್ಮೆ ಇದೆ. ಹಾಗಿದ್ದರೂ ಮತ್ತಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳಲು ಗ್ರಂಥಾಲಯದಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಸಾವಿತ್ರಿ ರಾಮ್ ಕಣೆಮರಡ್ಕ, ಗ್ರಂಥಪಾಲಕಿ, ಮಂಡೆಕೋಲು, ಗ್ರಾ.ಪಂ ಗ್ರಂಥಾಲಯ. https://www.vijayavani.net/prize-in-state-level-karate https://www.vijayavani.net/dashavanotsava-celebration-of-okkaliga-swa-sahaya-trust

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net