ಕಷ್ಟಗಳಿಗೆ ಸ್ಪಂದಿಸುವ ಹೃದಯಗಳಿಗೆ ಮನ್ನಣೆ

Bdk_adversity
Published on

ವಿಜಯವಾಣಿ ಸುದ್ದಿಜಾಲ ಬದಿಯಡ್ಕ ಕಷ್ಟಗಳಿಗೆ ಸ್ಪಂದಿಸುವ ಹೃದಯ ಗುರುತಿಸಲ್ಪಡುತ್ತದೆ. ಎಲ್ಲರೂ ಒಂದಾದರೆ ಮಾತ್ರ ಧರ್ಮ ಕೇಂದ್ರ ಬೆಳೆಯಲು ಸಾಧ್ಯ. ಉಳ್ಳವರು ಇಲ್ಲದವರಿಗೆ ನೀಡಿದಾಗ ಸಮಾಜ ಸಮತೋಲನದಿಂದಿರಲು ಸಾಧ್ಯ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. ಕೊಂಡೆವೂರು ಮಠದಲ್ಲಿ ನೂತನವಾಗಿ ನಿರ್ಮಿಸಿದ ವಿಶ್ವಂ ಅತಿಥಿ ಗೃಹವನ್ನು ಭಾನುವಾರ ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಒಡಿಶಾದ ಬಾಲಸೋರ್ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿ, ಜೀವಕೋಟಿಗಳಲ್ಲಿ ಶ್ರೇಷ್ಠವಾದ ಮಾನವ ಜನ್ಮದ ಮಹತ್ವ ಧರ್ಮದ ಆಧಾರದ ಮೇಲಿನ ಜೀವನ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಕೊಂಡೆವೂರು ಶ್ರೀಗಳಂತಹ ಸಂತಶ್ರೇಷ್ಠರ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು. ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಭಾ ಸದಸ್ಯ ಕೆ.ನಾರಾಯಣ ಬೆಂಗಳೂರು, ರಾಜ್ಯಸಭಾ ಮಾಜಿ ಸದಸ್ಯ ಡಾ.ಕೆ.ಸಿ.ರಾಮಮೂರ್ತಿ ಬೆಂಗಳೂರು, ಯತಿ ವಿನಯಸಾಗರ್ ಉಜ್ಜೈನಿ, ಉದ್ಯಮಿ ರಘುರಾಮ ಶೆಟ್ಟಿ ಮುಂಬೈ, ಶ್ರೀ ಉಮಾಮಹೇಶ್ವರೀ ದೇವಸ್ಥಾನ ಕಾಪಿಕಾಡ್‌ನ ಆಡಳಿತ ಮೊಕ್ತೇಸರ ಎ.ಜೆ ಶೇಖರ್ ಮಾತನಾಡಿದರು. ಧಾರ್ಮಿಕ, ಸಾಮಾಜಿಕ ಮುಂದಾಳುಗಳಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೆ.ಕೆ.ಶೆಟ್ಟಿ ಮತ್ತು ವಿಶ್ವನಾಥ್ ವೇಂಗರ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸ್ವಾಗತಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ವಂದಿಸಿದರು. ಅರವಿಂದಾಕ್ಷ ಭಂಡಾರಿ, ವಕೀಲ ಗಂಗಾಧರ ಕೊಂಡೆವೂರು, ಅಶೋಕ ಬಾಡೂರು ಹಾಗೂ ಪ್ರಶೌನ್ ಕಣ್ಣೂರು ನಿರೂಪಿಸಿದರು. ವಿದುಷಿ ಸವಿತಾ ಜೀವನ್ ಮತ್ತು ಶಿಷ್ಯ ವೃಂದದವರಿಂದ ನೃತ್ಯ ವೈಭವ-2025 ನಡೆಯಿತು. ನಕ್ಷತ್ರನವದಲ್ಲಿ ನವಗ್ರಹ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಪ್ರಧಾನ ಅರ್ಚಕ ಕಮಲಾದೇವೀ ಪ್ರಸಾದ ಆಸ್ರಣ್ಣರ ಆಚಾರ್ಯತ್ವದಲ್ಲಿ ಶ್ರೀಲಕ್ಷ್ಮೀ ನಾರಾಯಣ ಹೃದಯ ಹೋಮ ನಡೆಯಿತು.

ಜೀವನದ ಆತ್ಯಂತಿಕ ಲಕ್ಷ್ಯ ನೆಮ್ಮದಿಯಿಂದ ಸಾಯುಜ್ಯ ಪ್ರಾಪ್ತಿಯಾಗಿದ್ದು, ಬದುಕಿನ ಜಂಜಡಗಳ ಮಧ್ಯೆ ಆಧ್ಯಾತ್ಮಿಕ ಅನುಭೂತಿ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ಕೊಂಡೆವೂರು ಮಠ ರಾಷ್ಟ್ರದಲ್ಲೇ ಗುರುತಿಸಲ್ಪಟ್ಟ ಆಧ್ಯಾತ್ಮಿಕ, ಧಾರ್ಮಿಕದ ಜೊತೆಗೆ ಆಶ್ರಿತರಿಗೆ ಆಸರೆಯಾಗಿ ಬೆಂಬಲ ನೀಡುವ ಕೇಂದ್ರವಾಗಿದೆ. ಶ್ರೀಪಾದ ಯಸ್ಸೋ ನಾಯಕ್, ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net