ಪೀಡೆ ಸರ್ವೇಕ್ಷಣಾ ತಂಡ ರಚನೆ

0101
Published on

ಬೆಳಗಾವಿ: ಪ್ರಸಕ್ತ ವರ್ಷ ಉತ್ತಮ ಮುಂಗಾರು ಆರಂಭವಾಗಿದ್ದು, ಫಸಲು ಚೆನ್ನಾಗಿ ಬರಬಹುದು ಎಂದುಕೊಂಡಿದ್ದ ರೈತರಿಗೆ ಈಗ ನಿರಾಸೆಯಾಗುತ್ತಿದೆ. ಜಿಲ್ಲೆಯ ಪ್ರಮುಖ ಬೆಳೆಗಳಿಗೆ ಕೀಟಗಳ ಉಪಟಳ ಹೆಚ್ಚಾಗಿದೆ. ಜತೆಗೆ ವಿವಿಧ ರೋಗಗಳು ವಕ್ಕರಿಸಿಕೊಂಡಿದ್ದು, ಅನ್ನದಾತರು ಚಿಂತೆಗೀಡಾಗಿದ್ದಾರೆ.

ಪ್ರಮುಖವಾಗಿ ಕಬ್ಬಿಗೆ ಗೊಣ್ಣೆ ಹುಳುವಿನ ಕಾಟ ಶುರುವಾಗಿದೆ. ಜಿಲ್ಲಾದ್ಯಂತ ಈ ಹುಳು ಉಪಟಳ ಹೆಚ್ಚಾಗಿದ್ದರಿಂದ ರೈತರು ಏದುಸಿರು ಬಿಡುತ್ತಿದ್ದಾರೆ. ಜತೆಗೆ ಕಬ್ಬಿನ ಎಲೆಗೆ ಚುಕ್ಕೆ ರೋಗ, ತುಕ್ಕು ರೋಗ ಅಂಟಿಕೊಂಡಿದೆ. ಗೋವಿನ ಜೋಳಕ್ಕೆ ಲದ್ದಿ ಹುಳುವಿನ ಉಪಟಳ ಹೆಚ್ಚಾಗಿದೆ. ಅದರೊಂದಿಗೆ ಉರಿಜಿಗಿ ರೋಗ ಆವರಿಸಿದೆ. ಭತ್ತದ ಬೆಳೆಗೆ ಬೆಂಕಿ ರೋಗ ಹಾಗೂ ಕಾಂಡ ಕೊರೆಯುವ ಕೀಟ ಭಾದೆ ಹೆಚ್ಚುತ್ತಿದೆ. ಹೆಸರು ಮತ್ತು ಉದ್ದಿಗೆ ಸಸ್ಯ ಹೇನು ಕಂಟಕವಾಗುತ್ತಿವೆ. ಹತ್ತಿ ಬೆಳೆಗೆ ರಸ ಹೀರುವ ಕೀಟಗಳ ಭಾದೆ ಆವರಿಸಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆ ಸಂರಕ್ಷಣೆಗೆ ರೈತರು ಹರಸಾಹಸಪಡುತ್ತಿದ್ದಾರೆ.

ಪೀಡೆ ಸರ್ವೇಕ್ಷಣಾ ತಂಡ ರಚನೆ: ಬೆಳೆಗಳನ್ನು ಕೀಟ ಹಾಗೂ ವಿವಿಧ ರೋಗಗಳಿಂದ ರಂಕ್ಷಿಸುವುದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಪೀಡೆ ಸರ್ವೇಕ್ಷಣಾ ತಂಡಗಳನ್ನು ರಚಿಸಿ ಕಾರ್ಯ ಪ್ರವೃತ್ತರಾಗಿದ್ದಾರೆ. ಬೆಳಗಾವಿ-ಖಾನಾಪುರ, ಅಥಣಿ- ರಾಯಬಾಗ-ಗೋಕಾಕ, ಹುಕ್ಕೇರಿ-ಚಿಕ್ಕೋಡಿ ಹಾಗೂ ಬೈಲಹೊಂಗಲ- ರಾಮದುರ್ಗ-ಸವದತ್ತಿ ಎಂದು ವಲಯ ಮಾಡಲಾಗಿದೆ.

ಈ ವಲಯಗಳಿಗೆ ಪೀಡೆ ಸರ್ವೇಕ್ಷಣಾ ತಂಡದಲ್ಲಿರುವ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು ತೆರಳಿ ಬೆಳೆಗಳ ಹಾನಿ ಅಧ್ಯಯನ ಮಾಡುತ್ತಿದ್ದಾರೆ. ಬೆಳೆ ಸಂರಕ್ಷಣೆ ತುರ್ತು ಕ್ರಮ ಕೈಗೊಳ್ಳಲು ಕಾರ್ಯಪ್ರವೃತ್ತರಾಗಿದ್ದಾರೆ. ಬಳಿಕ ಸರ್ವೇ ಮಾಡಿದ ವರದಿಯನ್ನು ನಿಗದಿತ ದಿನಾಂಕದೊಳಗೆ ಕೃಷಿ ಇಲಾಖೆಗೆ ಸಲ್ಲಿಸುತ್ತಾರೆ. ವರದಿ ಆಧರಿಸಿ ಅಧಿಕಾರಿಗಳು ಬೆಳೆಗಳ ಸಂರಕ್ಷಣೆಗೆ ರೈತರೊಂದಿಗೆ ಕೈ ಜೋಡಿಸುತ್ತಾರೆ. ಕಾಲ, ಕಾಲಕ್ಕೆ ಅಗತ್ಯ ಪರಿಹಾರೋಪಾಯ ಕಂಡುಕೊಳ್ಳುತ್ತಾರೆ.

ತೊಗರಿ ಬೆಳೆಗೂ ಕಾಡಿತ್ತು ಕೀಟಬಾಧೆ: ಸುಮಾರು 15 ವರ್ಷದಿಂದ ಕಲಬುರಗಿಯಲ್ಲಿ ತೊಗರಿಗೆ ನಾನಾ ರೋಗಗಳು ಅಂಟಿದ್ದವು. ಆಗ ಸರ್ಕಾರ ಬೆಳೆ ಸಂರಕ್ಷಣೆಗೆ ಪೀಡೆ ಸರ್ವೇಕ್ಷಣಾ ತಂಡ ರಚಿಸಿತ್ತು. ನಂತರದ ದಿನಗಳಲ್ಲಿ ತುರ್ತು ಅಗತ್ಯವಿದ್ದ ಕಡೆ ಇಲಾಖೆಯಿಂದ ತಂಡ ರಚನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕ್ಷೇತ್ರಗಳಿಗೆ ತಂಡದ ಭೇಟಿ: ಜು.30 ಹಾಗೂ ಆ.17ರಂದು ಬೆಳಗಾವಿ ತಾಲೂಕಿನಲ್ಲಿ ಪೀಡೆ ಸರ್ವೇಕ್ಷಣಾ ತಂಡ ಬೆಳೆಗಳ ಪರಿಶೀಲನೆ ನಡೆಸಲಿದೆ. ರೈತರು ಬೆಳಗಾವಿಯ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು. ಆ. 8 ಮತ್ತು 30ರಂದು ಖಾನಾಪುರದ ತಾಲೂಕಿನ ಆಯ್ದ ಭಾಗಳಲ್ಲಿ ಅಧಿಕಾರಿಗಳ ತಂಡ ಬೆಳೆಗಳನ್ನು ಪರಿಶೀಲನೆ ಮಾಡಲಿದೆ. ಜುಲೈ 19 ಮತ್ತು ಆ. 17ರಂದು ರಾಯಬಾಗದಲ್ಲಿ, ಆ. 30ರಂದು ಗೋಕಾಕನಲ್ಲಿ, ಆ. 8ರಂದು ಅಥಣಿಯಲ್ಲಿ, ಜು. 21, ಆ. 10 ಮತ್ತು 20ರಂದು ಚಿಕ್ಕೋಡಿ, ಜು. 27 ಮತ್ತು ಆ. 14ರಂದು ಹುಕ್ಕೇರಿ ತಾಲೂಕಿನಲ್ಲಿ ಬೆಳೆಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಜತೆಗೆ ಜು. 21 ಮತ್ತು ಆ. 10ರಂದು ಸವದತ್ತಿ, ಜು. 27 ಮತ್ತು ಆ. 20ರಂದು ಬೈಲಹೊಂಗಲ, ಆ. 14ರಂದು ರಾಮದುರ್ಗ ತಾಲೂಕಿಗೆ ತೆರಳಿ ಬೆಳೆಗಳ ಅಂಟಿದ ರೋಗ, ಕೀಟಗಳ ಭಾದೆ ಪರಿಶೀಲಿಸಿ ರೈತರಿಗೆ ಉಪಯುಕ್ತ ತಾಂತ್ರಿಕ ಸಲಹೆ ನೀಡಲಿದೆ.

ಜಿಲ್ಲೆಯ ಪ್ರಮುಖ ಬೆಳೆಗಳಿಗೆ ಕೀಟಗಳ ಭಾದೆ ಹಾಗೂ ರೋಗ ಆವರಿಸಿದೆ. ಹೀಗಾಗಿ ಬೆಳೆ ಸಂರಕ್ಷಣೆಗೆ ಪೀಡೆ ಸರ್ವೇಕ್ಷಣಾ ತಂಡ ರಚಿಸಲಾಗಿದೆ. ತಂಡದಲ್ಲಿರುವ ಪರಿಣತರು ರೈತರ ಹೊಲಗಳಿಗೆ ತೆರಳಿ ರೋಗ ಪತ್ತೆ ಹಚ್ಚಿ ರೈತರಿಗೆ ಸಲಹೆ ನೀಡುತ್ತಾರೆ. ಜತೆಗೆ ಕೃಷಿ ಇಲಾಖೆಗೆ ಮೇಲಿಂದ ಮೇಲೆ ವರದಿ ಸಲ್ಲಿಸುತ್ತಾರೆ.| ಜಿಲಾನಿ ಮೊಖಾಶಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬೆಳಗಾವಿ

| ಜಗದೀಶ ಹೊಂಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net