ಕ್ರೆಡಿಟ್ ಕಾರ್ಡ್: 3.29 ಲಕ್ಷ ರೂ. ವಂಚಿಸಿದ್ದವ ಸೆರೆ

14 ckm 6
3.29 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರ ತಂಡ ಹಾಗೂ ವಶಕ್ಕೆ ಪಡೆದಿರುವ ಹಣ.
Published on

ಚಿಕ್ಕಮಗಳೂರು: ವ್ಯಕ್ತಿಯೊಬ್ಬರ ಬಳಿ ಇದ್ದ ಹಳೆಯ ಕ್ರೆಡಿಟ್ ಕಾರ್ಡ್‌ಗಳ ಬದಲಾಗಿ ಹೊಸ ಕಾರ್ಡ್‌ಗಳನ್ನು ಮಾಡಿಕೊಡುವುದಾಗಿ ನಂಬಿಸಿ 3.29 ಲಕ್ಷ ರೂ. ದೋಚಿದ್ದ ಆರೋಪಿಯನ್ನು ಬೀರೂರು ಪೊಲೀಸರು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ ಪ್ರತಾಪ್ ಬಂಧಿತ ಆರೋಪಿ. ಹೊಗರೇಹಳ್ಳಿ ಗ್ರಾಮದ ಪ್ರದೀಪ್ ಎಂಬುವರಿಗೆ ಕಳೆದ ವರ್ಷ ಆಕಾರ ಕ್ಯಾಪಿಟಲ್ ಬ್ಯಾಂಕ್ ಹೆಸರಿನಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಅವರ ಬಳಿ ಇದ್ದ 4 ಕ್ರೆಡಿಟ್ ಕಾರ್ಡ್‌ಗಳನ್ನು ಹೊಸಕಾರ್ಡ್‌ಗಳನ್ನಾಗಿ ಬದಲಿಸಿಕೊಡುತ್ತೇವೆ ಎಂದು ನಂಬಿಸಿ 3.29 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು, ಮೋಸ ಮಾಡಿದ್ದ. ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಆರೋಪಿಯ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ಡಿವೈಎಸ್ಪಿ ಹಾಲಮೂರ್ತಿರಾವ್ ಮಾರ್ಗದರ್ಶನದೊಂದಿಗೆ ಮಾಹಿತಿ ಕಲೆಹಾಕಿದ ಬೀರೂರು ಪೊಲೀಸರು ಆರೋಪಿತ ವ್ಯಕ್ತಿಯನ್ನು ಖಚಿತ ಮಾಹಿತಿಯ ಮೇರೆಗೆ ವಶಕ್ಕೆ ಪಡೆದು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡ ಆರೋಪಿತ ವ್ಯಕ್ತಿಯಿಂದ 1 ಲಕ್ಷ ರೂ. ನಗದನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬೀರೂರು ಸಿಪಿಐ ಎಸ್.ಎನ್.ಶ್ರೀಕಾಂತ್, ಪಿಎಸೈ ಬಿ.ಆರ್.ಸಜಿತ್‌ಕುಮಾರ್, ಸಿಬ್ಬಂದಿ ಡಿ.ವಿ.ಹೇಮಂತ್‌ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ವಿ.ಟಿ.ಶಿವಕುಮಾರ್, ರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net