ನಗರಾಭಿವೃದ್ಧಿಗೆ ಕ್ರೆಡಾಯ್​ ಕೊಡುಗೆ ಅಪಾರ

Credai's contribution to urban development is immense
ವಿಜಯಪುರ ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಕ್ರೆಡಾಯ್​ ಸಂಸ್ಥೆಯಿಂದ ಹಮ್ಮಿಕೊಂಡಿರುವ ಪ್ರಾಪರ್ಟಿ ಎಕ್ಸ್​ಪೋವನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ರಾಜಶೇಖರ ಡಂಬಳ ಉದ್ಘಾಟಿಸಿದರು. ಮಹಾವೀರ ಬೋರಣ್ಣವರ, ಮಹಾವೀರ ಪಾರೇಖ, ಅನುಪಮ ರುಣವಾಲ, ವಿ.ಜಿ. ಪಾರೇಖ, ಮುಖೇಶ ಮೆಹತಾ ಇತರರಿದ್ದರು.
Published on

ವಿಜಯಪುರ: ವಿಜಯಪುರದ ಸಮಗ್ರ ಬೆಳವಣಿಗೆಗೆ ಕ್ರೆಡಾಯ್​ ಸಂಸ್ಥೆ ಕೊಡುಗೆ ಸಾಕಷ್ಟಿದೆ. ವಸತಿ, ಉದ್ಯಮ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಯಶಸ್ಸು ಸಾಗಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ರಾಜಶೇಖರ ಡಂಬಳ ಹೇಳಿದರು.

ಶುಕ್ರವಾರ ನಗರದ ಸಂಗನಬಸವ ಸಮುದಾಯ ಭವನದಲ್ಲಿ ಕ್ರೆಡಾಯ್​ ಸಂಸ್ಥೆ ಹಮ್ಮಿಕೊಂಡಿರುವ ಮೂರು ದಿನಗಳ ರಿಯಾಲಿಟಿ ಎಕ್ಸ್​ಪೋ 3.0 ಉದ್ಘಾಟಿಸಿ ಅವರು ಮಾತನಾಡಿ, ಹುಬ್ಬಳ್ಳಿ, ಬೆಳಗಾವಿಯಲ್ಲಿರುವ ಕ್ರೆಡಾಯ್​ ಸಂಸ್ಥೆಗಳಿಗಿಂತ ಇಲ್ಲಿನ ಕ್ರೆಡಾಯ್​ ಸಂಸ್ಥೆ ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರವೂ ಎಲ್ಲಾ ರೀತಿಯ ಸಹಕಾರ ನೀಡುವುದು ಎಂದು ಭರವಸೆ ನೀಡಿದರು.

ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ ಮಾತನಾಡಿ, ಮಹಾನಗರ ಪಾಲಿಕೆ ವಿಜಯಪುರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಸಂ&ಸಂಸ್ಥೆಗಳು, ಉದ್ಯಮಿಗಳು ಉದ್ಯಾನವನ ನಿರ್ವಹಣೆ ಹೊಣೆ ಹೊರುವುದಾದರೆ ಅದನ್ನು ವಹಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಗುಂಟಾ ಪ್ಲಾಟ್​ಗಳಿಗಿಂತ ಎನ್​ಎ ಪ್ಲಾಟ್​ಗಳ ಖರೀದಿ ಗ್ರಾಹಕರಿಗೆ ಎಲ್ಲಾ ರೀತಿಯಲ್ಲಿ ಯೋಗ್ಯ ಎಂದರು.ಕ್ರೆಡಾಯ್​ ಸಂಸ್ಥೆ ಮಾರ್ಗದರ್ಶಕ, ಬಿಲ್ಡರ್​, ಅನುಪಮ ರುಣವಾಲ ಮಾತನಾಡಿ, ನಗರದ

ಅಭಿವೃದ್ಧಿಗೆ ಕ್ರೆಡಾಯ್​ ಮುಂದಾಗಿದ್ದು, ಅದಕ್ಕೆ ಪೂರಕವಾಗಿ ಮಹಾನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಸಹಕಾರ ನೀಡಿ ಒಟ್ಟಾಗಿ ಶ್ರಮಿಸಿದರೆ ನಗರ ಇನ್ನೂ ಹೆಚ್ಚಿನ ಅಭಿವೃದ್ಧಿಕಾಣುವುದು. ಜೊತೆಗೆ ಗ್ರಾಹಕರಿಗೆ ಅತ್ಯುತ್ತಮ ಪ್ಲಾಟ್​, ಮನೆಗಳ ನಿರ್ಮಾಣಕ್ಕೂ ಸಹಕಾರ ಆಗಲಿದೆ ಎಂದರು.

ಕ್ರೆಡಾಯ್​ ಅಧ್ಯಕ್ಷ ಮಹಾವೀರ ಪಾರೇಖ ಮಾತನಾಡಿ, ವಿಜಯಪುರದಲ್ಲಿ 1980ರಲ್ಲಿ ಕ್ರೆಡಾಯ್​ ಸಂಸ್ಥೆ ಆರಂಭವಾಗಿದ್ದು ಅಂದಿನಿಂದ ಇಲ್ಲಿಯವರೆಗೆ ನಗರಾಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡಿದೆ. 300 ಕ್ಕೂ ಅಧಿಕ ಉದ್ಯಾನವನಗಳನ್ನು, 500ಕ್ಕೂ ಹೆಚ್ಚು ಸಿಎ ನಿವೇಶನಗಳನ್ನು ನೀಡಿದೆ. ಸಿಎ ನಿವೇಶನಗಳಿಂದ ಸಾಕಷ್ಟು ಅನುಕೂಲವಾಗಿದ್ದು, ಉದ್ಯಾನವನಗಳ ಸ್ಥಿತಿ ಇನ್ನೂ ಸುಧಾರಿಸಬೇಕಿದೆ. ಅಲ್ಲದೆ ಹಲವು ಕಡೆಗಳಲ್ಲಿ ಒತ್ತುವರಿಯಾಗಿದೆ. ಈ ದಿಸೆಯಲ್ಲಿ ಮಹಾನಗರಪಾಲಿಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಗ್ರಾಹಕರು ಕೊಳ್ಳುವುದರಿಂದ ಅನುಕೂಲವಾಗಿದೆ. ಬ್ಯಾಂಕ್​, ಹಣಕಾಸು ಸಂಸ್ಥೆಗಳಿಂದಲೂ ಸಾಲಸೌಲಭ್ಯ ದೊರೆಯುತ್ತಿದೆ. ಮೂರು ದಿನಗಳ ಮೇಳದ ಸದುಪಯೋಗವನ್ನು ಪಡೆದುಕೊಳ್ಳಲು ಮನವಿ ಮಾಡಿದರು.

ಕ್ರೆಡಾಯ್​ ಸಂಸ್ಥಾಪಕ ಅಧ್ಯಕ್ಷ ವಿ.ಜಿ. ಪಾರೇಖ, ಕಾರ್ಯದರ್ಶಿ ಮುಖೇಶ ಮೆಹತಾ, ಸದಸ್ಯರಾದ ಶರದ್​ ರೂಡಗಿ, ವಿನಯ್​ ರುಣವಾಲ, ಅನೀಲ್​ ಅವಳೆ, ಮನೀಶ್​ ಪಾರೇಖ, ಅಂಕಿತ್​ ಪಾರೇಖ ಇತರರಿದ್ದರು.

ಎಕ್ಸ್​ಪೋಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಎಕ್ಸ್​ಪೋನಲ್ಲಿ ನಿವೇಶನ, ಮನೆಗಳಿಗೆ ಬುಕ್ಕಿಂಗ್​ ಮಾಡಿದ ಗ್ರಾಹಕರಿಗೆ ಐದು ಗ್ರಾಂ ಬಂಗಾರದ ನಾಣವನ್ನು ಕೊಡುಗೆಯಾಗಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net