

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ಕ್ರೆಡೈ (ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್ಗಳ ಸಂಘಗಳ ಒಕ್ಕೂಟ) ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ಪಾಲಿಕೆಯ ಅತಿರೇಕದ ನಡೆಯಾಗಿದೆ. ಯಾವುದೇ ಪೂರ್ವಸೂಚನೆ ಅಥವಾ ಸಾರ್ವಜನಿಕ ಸಮಾಲೋಚನೆಯಿಲ್ಲದೆ ಈ ತೀರ್ಮಾನ ತೆಗೆದುಕೊಂಡಿರುವುದು ದುರದೃಷ್ಟಕರ. ಇದರಿಂದ ನಗರದ ಪ್ರಾಪರ್ಟಿ ಮಾಲೀಕರು, ವ್ಯಾಪಾರಸ್ಥರು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಭಾರಿ ಆರ್ಥಿಕ ಒತ್ತಡ ಉಂಟಾಗಿದೆ ಎಂದು ಕ್ರೆಡೈ ಕರ್ನಾಟಕ ಅಧ್ಯಕ್ಷ ಪ್ರದೀಪ ರಾಯ್ಕರ್ ಹೇಳಿದ್ದಾರೆ.
ನಗರ ಅಭಿವೃದ್ಧಿಗೆ ಬೇಕಾಗುವ ಖರ್ಚು ವೆಚ್ಚವನ್ನು ನಿರ್ವಹಿಸಲು ತೆರಿಗೆ ಸಂಗ್ರಹ ಸರಿ ಎನ್ನಬಹುದು. ಆದರೆ, ಈ ರೀತಿಯ ಅತಿರೇಕದ ತೆರಿಗೆ ಹೆಚ್ಚಳವು ನ್ಯಾಯಸಮ್ಮತವಲ್ಲ. ಇದು ಆರ್ಥಿಕ ಸಂಕಷ್ಟದಲ್ಲಿರುವ ಮನೆ ಮಾಲೀಕರು ಮತ್ತು ಸಣ್ಣ ವ್ಯವಹಾರಸ್ಥರಿಗೆ ದೊಡ್ಡ ಹೊರೆ ಆಗುತ್ತದೆ. ಸಮಾಲೋಚನೆಯಿಲ್ಲದೆ ತೆಗೆದುಕೊಂಡ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳೀಯ ನಾಗರಿಕ ಸಂಘಟನೆಗಳು, ವ್ಯಾಪಾರ ಸಂಘಗಳು ಮತ್ತು ಕ್ರೆಡೈ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಪಾಲಿಕೆಯು ನ್ಯಾಯಸಮ್ಮತವಾದ ನಿರ್ಧಾರ ತೆಗೆದುಕೊಳ್ಳಬೇಕು. ಸಮೃದ್ಧ ಮತ್ತು ಸುಸ್ಥಿರ ನಗರಾಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಲು ಕ್ರೆಡೈ ಬದ್ಧವಾಗಿದೆ. ಆದರೆ, ಯಾವುದೇ ತೆರಿಗೆ ಪರಿಷ್ಕರಣೆಗಳು ಪಾರದರ್ಶಕತ ಮತ್ತು ಸಾರ್ವಜನಿಕ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಬೇಕೆಂಬುದು ನಮ್ಮ ನಿಲುವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.