

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೀರುವ ಪ್ರಕ್ರಿಯೆ ಸಾಧ್ಯವಾಗದಿದ್ದರೆ, ಒಳಗೊಳ್ಳುವ ಪ್ರಕ್ರಿಯೆಯೂ ಸಾಧ್ಯವಾಗುವುದಿಲ್ಲ ಎಂದು ಹಿರಿಯ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.
ನಗರದ ರಂಗಾಯಣ ಆವರಣದಲ್ಲಿನ ಸಾಂಸ್ಕೃತಿಕ ಸಮುಚ್ಛಯದಲ್ಲಿ ಗಿರಡ್ಡಿ ಗೋವಿಂದರಾಜ ಪ್ರತಿಷ್ಠಾನ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ. ಗಿರಡ್ಡಿ ಗೋವಿಂದರಾಜ ನೆನಪಿನ ರಾಜ್ಯ ಮಟ್ಟದ ವಿಮರ್ಶಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಸ್ಕೃತಿಕ ಓದು ಮತ್ತು ಕಲೆಗಳು ವಿಷಯ ಕುರಿತು ಅವರು ಮಾತನಾಡಿದರು.
ಎಲ್ಲವನ್ನೂ ಹೀರಿ ಮೀರುವ ಶಕ್ತಿಯನ್ನು ಕಲಾವಿದ, ಸಾಹಿತಿ ಸೇರಿ ಪ್ರತಿಯೊಬ್ಬ ಸೃಜನಶೀಲ ವ್ಯಕ್ತಿ ಪಡೆದುಕೊಳ್ಳಬೇಕು. ಅಂದಾಗಲೇ ಹೊಸತನ ಸಾಧ್ಯ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರ, ನಾಟಕ ಮೊದಲಾದ ಕಲೆಗಳನ್ನು ಹೇಗೆ ಓದಬೇಕು, ಒಪ್ಪಿಕೊಳ್ಳಬೇಕು, ನಿರ್ಧರಿಸಬೇಕು ಹಾಗೂ ಅರ್ಥಮಾಡಿಕೊಳ್ಳಬೇಕು ಎನ್ನುವುದನ್ನು ಮೊದಲು ಅರಿಯಬೇಕು. ಕಲೆಯ ಹೂರಣ ಕಾಲ, ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಅದಕ್ಕನುಗುಣವಾಗಿ ವಿಮರ್ಶೆಯ ಮಾನದಂಡಗಳು ಬದಲಾಗಬೇಕು ಎಂದರು.
ಮನುಷ್ಯ, ಸಂಬಂಧಗಳು, ಸಮಾಜ, ಮಾಧ್ಯಮ, ಕಲೆ ಹೀಗೆ ಎಲ್ಲವನ್ನು ಒಳಗೊಳ್ಳುವ ಪೂರ್ಣದೃಷ್ಟಿ ನಮ್ಮ ಶಿಕ್ಷಣದ ಭಾಗವಾಗಬೇಕು. ವಾಸ್ತವವನ್ನು ಹಲವು ಆಯಾಮಗಳಿಂದ ಅಧ್ಯಯನ ಮಾಡಿ, ಒಟ್ಟಾಗಿ ಅರ್ಥಮಾಡಿಕೊಳ್ಳುವುದೇ ಪೂರ್ಣದೃಷ್ಟಿ. ಪ್ರಸ್ತುತ ವ್ಯಕ್ತಿಗಳ ನಡುವೆ ಬಾಗಿಲುಗಳು ಹುಟ್ಟುವ ಬದಲು ಗೋಡೆಗಳ ನಿರ್ಮಾಣವಾಗುತ್ತಿವೆ. ಇದು ಅಪಾಯಕಾರಿ ಬೆಳವಣಿಗೆ. ಟೀಕೆ, ವಿಮರ್ಶೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ ಎಂದರು.
ಶಿವಮೊಗ್ಗ ಸಹ್ಯಾದ್ರಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮೇಟಿ ಮಲ್ಲಿಕಾರ್ಜುನ ಅವರಿಗೆ ಪ್ರಸಕ್ತ ಸಾಲಿನ ವಿಮರ್ಶಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಟಿ.ಅವಿನಾಶ ಪ್ರಶಸ್ತಿ ಕೃತಿ ಕುರಿತು ಮಾತನಾಡಿದರು.
ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಪ್ರೊ. ರಾಘವೇಂದ್ರ ಪಾಟೀಲ, ಸರೋಜಾ ಗಿರಡ್ಡಿ, ವೆಂಕಟೇಶ ಮಾಚಕನೂರ, ಪ್ರೊ. ಎಸ್.ಬಿ.ಶಿರೋಳ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಪ್ರೊ. ಎಸ್.ಆರ್.ತೋಡಕರ, ಹೇಮಾ ಪಟ್ಟಣಶೆಟ್ಟಿ, ಸುನೀಲ ಗಿರಡ್ಡಿ, ಮಾಲತಿ ಪಟ್ಟಣಶೆಟ್ಟಿ, ಇತರರು ಇದ್ದರು.