

ಸಿಂದಗಿ: ಯುವಕರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕೆಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಪಿಇಎಸ್ ಕಾಲೇಜಿನಲ್ಲಿ ಲಯನ್ಸ್ ಕ್ಲಬ್, ಮಾತೋಶ್ರೀ ಗುರುಬಸಮ್ಮ ಸೋಮಾಪುರ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಬಾಳಬುತ್ತಿ ಕೃತಿ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸೃಜನಶೀಲ ಸಾಹಿತ್ಯ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ಸಾಹಿತ್ಯ ರಚಿಸುವುದು, ಕೃತಿಗಳನ್ನು ಓದುವ ಹವ್ಯಾಸಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಓದುಗರ ಹಾಗೂ ಬರಹಗಾರರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕ ಸಿ.ಎಂ. ಬಂಡಗಾರ ಕೃತಿ ಪರಿಚಯಿಸಿ ಮಾತನಾಡಿ, ಕೃತಿಯಲ್ಲಿ ಲೇಖಕರು, ತಮ್ಮ ವ್ಯಕ್ತಿತ್ವದಂತೆಯೇ ಬದುಕಿನ ಚಿತ್ರಣಗಳೊಂದಿಗೆ ಜೀವನ ಮೌಲ್ಯದ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ವೃತ್ತಿಯಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯ ಕೃಷಿಗೈಯುತ್ತಿದ್ದಾರೆ. ಇವರು ರಚಿಸಿದ ಕೃತಿಗಳಲ್ಲಿ ಜಲಷಟ್ಪದಿಯೂ ಒಂದಾಗಿದೆ. ಷಟ್ಪದಿಗಳಲ್ಲಿ ಕೃತಿ ರಚಿಸುವುದು ಕಷ್ಟಕರ ಎಂದು ತಿಳಿಸಿದರು.
ಅಂಜುಮನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಪಾಟೀಲ ಗಣಿಹಾರ, ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್.ಎಂ. ಪಾಟೀಲ, ಪಿ.ಇ.ಎಸ್ ಸಂಸ್ಥೆ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಸಂಸ್ಥೆ ಆಡಳಿತಾಧಿಕಾರಿ ಐ.ಬಿ.ಬಿರಾದಾರ ಮಾತನಾಡಿದರು.
ಕೃತಿಕಾರ ಕೆ.ಎಚ್. ಸೋಮಾಪುರ ಅವರು ಕಾರ್ಯಕ್ರಮದಲ್ಲಿದ್ದ ಎರಡನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತ ನೀಡಿದರು. ಪಿ.ಎಂ. ಮಾಡಿವಾಳರ ಧಜ್ವ ವಂದನೆ ನೆರವೇರಿಸಿದರು. ತಾಲೂಕು ಲಯನ್ಸ್ ಕ್ಲಬ್ ಅಧ್ಯಕ್ಷ ಮಾಧು ಲೋಣಿ ಅಧ್ಯಕ್ಷತೆ ವಹಿಸಿದ್ದರು.
ಡಾ. ರವಿ ಗೋಲಾ, ಡಾ. ಅಂಬರೀಷ್ ಬಿರಾದಾರ, ಪ್ರೋ ಎಸ್. ವೈ. ಬೀಳಗಿ, ಪ್ರಾ. ಝಡ್.ಐ. ಅಂಗಡಿ, ಕು. ವಚನಾ ಸೋಮಾಪುರ, ಜಿ.ಎಸ್. ಕಡಣಿ, ಆರ್.ಬಿ. ಗೋಡೆಕರ ಇತರರಿದ್ದರು.