

ಕಾನಹೊಸಹಳ್ಳಿ: ಧಾರ್ಮಿಕ ಚಿಂತನೆ ಮತ್ತು ಪರಂಪರೆ ಕುರಿತ ಕಾವ್ಯಗಳ ಜತೆ ಸಮಾಜದ ತಲ್ಲಣಗಳನ್ನು ಕಾವ್ಯ ರೂಪದಲ್ಲಿ ರಚಿಸಿದ ಕೀರ್ತಿ ತಾಲೂಕಿನ ಸಾಹಿತಿಗಳಿಗೆ ಸಲ್ಲುತ್ತದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಾಕ್ಷ ಡಾ.ಕೆ.ಎಂ.ವೀರೇಶ್ ಹೇಳಿದರು.
ಸೋಫಿಯಾ ಶಾಲೆ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿದ್ವಾನ್ ಎಸ್.ಎಂ.ಚಂದ್ರಶೇಖರಯ್ಯ ಮತ್ತು ಬಿ.ಎಂ.ಗುರುಸಿದ್ದಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಧಾರ್ಮಿಕ, ಸಾಂಸ್ಕೃತಿಕ ಚಿಂತನೆಗಳನ್ನು ಕಾವ್ಯಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಎಸ್.ಎಂ.ಚಂದ್ರಶೇಖರಯ್ಯ ಹಾಗೂ ಬಿ.ಎಂ.ಗುರುಸಿದ್ದಯ್ಯ ಅವರ ಕೊಡುಗೆ ಅಪಾರ. ವಚನಗಳನ್ನು ಆಧರಿಸಿ ರಚಿಸಿದ ಕೃತಿಗಳು ಮೌಲ್ಯಯುತವಾಗಿವೆ ಎಂದರು.
ಸಾಹಿತಿ ಎನ್.ಎಂ.ರವಿಕುಮಾರ್ ಮಾತನಾಡಿ, ಎಸ್.ಎಂ.ಚಂದ್ರಶೇಖರಯ್ಯ ಮತ್ತು ಬಿ.ಎಂ.ಗುರುಸಿದ್ದಯ್ಯ ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ಶಾಲೆ ಆರಂಭಿಸಿದ್ದರು. ಇದು ಶೈಕ್ಷಣಿಕ ಪ್ರಗತಿಗೆ ಮತ್ತು ಧಾರ್ಮಿಕ ಪರಂಪರೆಗೆ ಹಾದಿಯಾಗಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಎಂ.ಸಂಗಮೇಶ್ವರಯ್ಯ, ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಇಂದುಮತಿ ತಿಪ್ಪೇಸ್ವಾಮಿ, ಸಾಹಿತಿ ಬಿ.ಎಂ.ಪ್ರಭುದೇವ, ಜಿಪಂ ಮಾಜಿ ಸದಸ್ಯ ಎಚ್.ರೇವಣ್ಣ, ಪ್ರಮುಖರಾದ ಮಂಜುನಾಥ, ತಿಪ್ಪೀರಮ್ಮ, ಯು.ಜಗನ್ನಾಥ, ಕೆ.ಜಿ.ಕುಮಾರಗೌಡ ಇತರರಿದ್ದರು.