ನಕಲಿ ಗೃಹಲಕ್ಷ್ಮಿ ಕಾರ್ಡ್ ಸೃಷ್ಟಿ : ಮೈಸೂರಿನಲ್ಲಿ ಆರೋಪಿ ಬಂಧನ

Gruhalakshmii
Published on

ಮೈಸೂರು: ರಾಜ್ಯ ಸರ್ಕಾರ ಆಗಸ್ಟ್ ತಿಂಗಳಿನಿಂದ ಜಾರಿಗೆ ತರಲು ಉದ್ದೇಶಿಸಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕಾರ ರಾಜ್ಯಾದ್ಯಂತ ಪ್ರಾರಂಭಗೊಂಡಿದ್ದು, ಈ ಯೋಜನೆಯ ನಕಲಿ ಸರ್ಟಿಫಿಕೇಟ್ ಸಿದ್ಧಪಡಿಸುತ್ತಿದ್ದ ಆರೋಪಿಯೊಬ್ಬನನ್ನು ಬುಧವಾರ ನಗರ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಾಳು ಮುಖ್ಯ ರಸ್ತೆಯ ಲೋಕನಾಯಕನಗರದ ನಕುಲ್ ಕಾಮನ್ ಸರ್ವೀಸ್ ಸೆಂಟರ್ ಮಾಲೀಕ ಸುರೇಶ್ ಕುಮಾರ್ ಬಂಧಿತ ಆರೋಪಿ. ಯೋಜನೆಗೆ ಹೆಸರು ನೋಂದಾಯಿಸುವ ಭರವಸೆ ನೀಡಿ ಆರೋಪಿಯು ಹಲವಾರು ಜನರಿಂದ ಹಣ ಪಡೆದುಕೊಂಡು ಯೋಜನೆಯ ನಕಲಿ ಸರ್ಟಿಫಿಕೇಟ್‌ಗಳನ್ನು ನೀಡಿದ್ದ. ಈ ಕುರಿತು ಖಚಿತ ಮಾಹಿತ ಮೇರೆಗೆ ಮೇಟಗಳ್ಳಿ ಠಾಣೆ ಪೊಲೀಸರು ಸೈಬರ್ ಸೆಂಟರ್ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ ನಕಲಿ ಸರ್ಟಿಫಿಕೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ.ನೀಡಲಾಗುವುದು. ಎರಡು ಸಾವಿರ ರೂ.ಗಳನ್ನು ಪಡೆಯಲು ಮಹಿಳೆಯರು ಮುಗಿ ಬಿದ್ದಿದ್ದು, ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಯುಎಲ್ಬಿ ಕಚೇರಿ ಮತ್ತು ವಲಯ ಆಯುಕ್ತರ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುತ್ತಿದ್ದು, ಯೋಜನೆಯಡಿ ಹೆಸರು ನೋಂದಾಯಿಸಲು ಮಹಿಳೆಯರು ಹರಸಾಹಸ ಪಡುತ್ತಿದ್ದಾರೆ. ಇದರ ಲಾಭವನ್ನು ಪಡೆಯಲು ನಕಲಿ ಸರ್ಟಿಫಿಕೇಟ್ ಸೃಷ್ಟಿಸುವ ಕಾರ್ಯ ಪ್ರಾರಂಭವಾಗಿದೆ.

ನಕಲಿ ಸರ್ಟಿಫಿಕೇಟ್ ಸೃಷ್ಟಿಸುತ್ತಿದ್ದ ಸೈಬರ್ ಸೆಂಟರ್‌ಗೆ ಪೊಲೀಸರು ಬೀಗ ಜಡಿದಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಮಾರ್ಗದರ್ಶನದಲ್ಲಿ ಹಾಗೂ ಡಿಸಿಪಿಗಳಾದ ಮುತ್ತುರಾಜ್ ಮತ್ತು ಜಾಹ್ನವಿ ಉಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿಪಿ ಗಜೇಂದ್ರ ಪ್ರಸಾದ್ ಮತ್ತು ಮೇಟಗಳ್ಳಿ ಠಾಣೆ ಇನ್ಸ್‌ಪೆಕ್ಟರ್ ದಿವಾಕರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net