ಮೈಸೂರಿನಲ್ಲಿ ಅಕ್ರಮ ಖಾತೆ ಸೃಷ್ಟಿಸಿ ಆಶ್ರಯ ಮನೆ ಕಬಳಿಸುತ್ತಿರುವ ಜಾಲ: ತನಿಖೆಗೆ ಶಾಸಕ ಜಿ.ಟಿ. ದೇವೇಗೌಡ ನಿರ್ದೇಶನ

GTD_2
Published on

ಮೈಸೂರು: ನಗರದ ವಿವಿಧ ಆಶ್ರಯ ಬಡಾವಣೆಗಳಲ್ಲಿ ಅನರ್ಹರು ನಕಲಿ ದಾಖಲೆ ಸೃಷ್ಟಿಸಿ ಮನೆಗಳನ್ನು ಪಡೆದಿರುವ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ರಾಜರಾಜೇಶ್ವರಿ ಆಶ್ರಯ ಬಡಾವಣೆಯಲ್ಲಿ 1992ರಲ್ಲಿ ಬಸವೇಗೌಡ ಅವರ ಪತ್ನಿ ಮಂಜುಳಾ ಅವರಿಗೆ ಮನೆ ಮಂಜೂರಾಗಿತ್ತು. ಮಂಜುಳಾ ಸೇರಿದಂತೆ ಸಾಕಷ್ಟು ಫಲಾನುಭವಿಗಳು ಮೂಲಸೌಕರ್ಯದ ಕೊರತೆ ಹಿನ್ನೆಲೆಯಲ್ಲಿ ಆ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅದೇ ಹೆಸರಿನ ಬೇರೊಂದು ವ್ಯಕ್ತಿಗೆ ಮನೆಯನ್ನು ಖಾತೆ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ನಗರದಲ್ಲಿ ವಿವಿಧ ಆಶ್ರಯ ಬಡಾವಣೆಗಳಲ್ಲಿ ಈ ರೀತಿ ಸಾಕಷ್ಟು ಪ್ರಕರಣಗಳು ನಡೆದಿರುವ ಸಾಧ್ಯತೆ ಇದೆ. ಹಾಗಾಗಿ ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಶ್ರಯ ಬಡಾವಣೆಗಳಲ್ಲಿ ಖಾಲಿ ಇರುವ ಮನೆಗಳನ್ನು ಗುರುತಿಸಿ ಆ ಮನೆ ಯಾರಿಗೆ ಹಂಚಿಕೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿ ಅದೇ ಹೆಸರಿನ ಬೇರೊಂದು ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಡುತ್ತಿರುವ ಜಾಲ ನಗರದಲ್ಲಿ ಇದೆ. ನೈಜ ಫಲಾನುಭವಿಯ ಹೆಸರು, ಅವರ ಪತಿಯ ಹೆಸರು ಮತ್ತು ನಕಲಿ ಫಲಾನುಭವಿಯ ಹೆಸರು ಮತ್ತು ಅವರ ಪತಿಯ ಹೆಸರು ಒಂದೇ ರೀತಿ ಇರುವ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸುಲಭವಾಗಿ ನಕಲಿ ವ್ಯಕ್ತಿಗೆ ಖಾತೆ ಮಾಡಿಕೊಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net